Tuesday 3 January 2017

ಮುನ್ನುಡಿ....


ಇದೇನೂ ಮೊದಲ ಪ್ರಯತ್ನವಲ್ಲ; ಕೊನೆಯದೂ ಅಲ್ಲ. ಈಗಾಗಲೇ ಹಲವರು ಈ ದಾರಿಯಲ್ಲಿ ನಡೆದಿದ್ದಾರೆ, ನಡೆಯುತ್ತಲೂ ಇದ್ದಾರೆ. ಅವರೆಲ್ಲರ ಮಧ್ಯೆ ನಾನೂ ಕೆಲ ಹೆಜ್ಜೆಯಿಡಬೇಕೆಂಬ ಸಣ್ಣ ಆಸೆಯೇ ಈ ಪ್ರಯತ್ನ.

"ಕನ್ನಡದಲ್ಲಿ ಓದುವುದಕ್ಕೆ ಒಳ್ಳೆಯ ಪುಸ್ತಕಗಳು ಯಾವುವು?" 
ಕಳೆದ ಎರೆಡು ವರ್ಷಗಳಲ್ಲಿ ಹಲವಾರು ಬಾರಿ ನಾನು ಕೇಳಿಸಿಕೊಂಡ ಪ್ರೆಶ್ನೆಯಿದು; ಆಗೆಲ್ಲಾ ಉತ್ತರ ಗೊತ್ತಿದ್ದರೂ ಹೇಳಲಾಗದೇ ಬ್ಬೆ...ಬ್ಬೆ...ಬ್ಬೆ.. ಎಂದಿದ್ದೇನೆ. ಪುಸ್ತಕ ಎಂದಾದಮೇಲೆ ಅದರಲ್ಲಿ ಒಳ್ಳೆಯದು ಕೆಟ್ಟದ್ದು ಎನ್ನುವ ಪಂಗಡವಿರಲಿಕ್ಕೆ ಸಾಧ್ಯವಾ? ಇದಕ್ಕೆ ಹೇಳಬೇಕಾದ ಉತ್ತರ ಪ್ರೆಶ್ನೆ ಕೇಳಿದವನ 'ಟೇಸ್ಟ್' ಹಾಗೂ ಆಸಕ್ತಿಯನ್ನು ಅವಲಂಬಿಸಿದೆ. ನನಗೆ ಇಷ್ಟವಾಗಿದ್ದು ಅವರಿಗೂ ಇಷ್ಟವಾಗಬೇಕಲ್ಲ? ಲೋಕೋ ಭಿನ್ನ ರುಚಿಃ. ನನ್ನ ಮಾತನ್ನು ನಂಬಿ ನೂರಾರು ರೂಪಾಯಿ ಕೊಟ್ಟು ತಂದ ಪುಸ್ತಕದ ವಸ್ತು ಅವರಿಗೆ ಹಿಡಿಸದೇಹೋದರೆ? ಆಮೇಲೆ ನನ್ನನ್ನು ಬೈದುಕೊಳ್ಳುತ್ತಾರಲ್ಲಾ ಎನ್ನುವ ಆತಂಕ ಒಂದು ಕಡೆ; ಮತ್ತವರು ಕನ್ನಡ ಪುಸ್ತಕಗಳೆಡೆಗೆ ತಿರುಗಿ ನೋಡದಂತಾದರೆ ಎನ್ನುವ ಭಯ ಇನ್ನೊಂದು ಕಡೆ!

ನಿಜ ಹೇಳಬೇಕೆಂದರೆ ಕಳೆದ ನಾಲ್ಕು ವರ್ಷಗಳಲ್ಲಿ ಈ ಪ್ರೆಶ್ನೆಗೆ ಉತ್ತರವನ್ನು ನಾನೂ ಹುಡುಕುತ್ತಲೇ ಇದ್ದೇನೆ. ಇಂಟರ್ನೆಟ್ ನಲ್ಲಿ, ಬೇರೆ ಬೇರೆ ಪತ್ರಿಕೆ-ಪುಸ್ತಕಗಳ ಹತ್ತಾರು ಲೇಖನಗಳಲ್ಲಿ, ಈಗಾಗಲೇ ಓದಿ ಮುಗಿಸಿದವರು ಹೇಳುವ ಅಭಿಪ್ರಾಯಗಳಲ್ಲಿ..... ಏಕೆಂದರೆ ಇದು ಒಂದೇ ಉತ್ತರಕ್ಕೆ ಮುಗಿದುಹೋಗುವ ಪ್ರೆಶ್ನೆಯಲ್ಲ; ಅದು ತಟ್ಟೆಯಲ್ಲಿಟ್ಟಿರುವ ಸವಿಸವಿ ಗೋಡಂಬಿಯಂತೆ! ತಿಂದಷ್ಟೂ ಹಸಿವು ಹೆಚ್ಚುತ್ತದೆ; ಇನ್ನೂಂದು ಬೇಕು, ಮತ್ತೊಂದು ಬೇಕು ಅನಿಸತೊಡಗುತ್ತದೆ. ಹುಡುಕಾಟ ಮುಂದುವರೆಯುತ್ತದೆ. 

ಕಾಲೇಜು ಮುಗಿಸಿ ಉದ್ಯೋಗ ಆರಂಭಿಸಿದ ಆರಂಭದ ದಿನಗಳಲ್ಲಿ ಓದಲು ಕಾದಂಬರಿಯೊಂದನ್ನು ಕೊಳ್ಳೋಣವೆಂದು ಪುಸ್ತಕದಂಡಿಗೆ ಹೋದರೆ ಅಲ್ಲಿ ಒಂದಕ್ಕೆ ಹತ್ತು ಆಯ್ಕೆಗಳು! ಶೀರ್ಷಿಕೆ ನೋಡಿ ಅದರ ಅಂತರಾಳವನ್ನು ಅಂದಾಜಿಸುವ ಜ್ಯೋತಿಷ್ಯ ನನಗಂತೂ ಗೊತ್ತಿರಲಿಲ್ಲ. ಒಂದರ ಜೊತೆ ಇನ್ನೊಂದು ಕೊಳ್ಳೋಣವೆಂದರೆ ಜೇಬು ವಟಗುಟ್ಟುತ್ತಿತ್ತು. ಅಂಚಿ ಪಿಂಚಿ ಚಾವಲ ಚುಂಚಿ ಗರ್ಡಾ ಪೇಪರ್ ಟುಂಯ್ಯ ಟುಸ್.... ಎಂದು ಮೇಲಿಂದ ಕೆಳಗೆ, ಕೆಳಗಿಂದ ಮೇಲೆ ನಾಲ್ಕರು ಬಾರಿ ಲೆಕ್ಕಾಚಾರ ಹಾಕಿ ಕೊಂಡುತಂದ ಪುಸ್ತಕ ಅಂದುಕೊಂಡಷ್ಟು ಖುಷಿ ಕೊಡಲಿಲ್ಲ. ಸಾರ್ವಜನಿಕ ಗ್ರಂಥಾಲಯದಲ್ಲಿ ನನ್ನ ಅಭಿರುಚಿಗೆ ತಕ್ಕ ಪುಸ್ತಕಗಳು ಸಿಕ್ಕವಾದರೂ ಅವುಗಳ ಸಂಖ್ಯೆ ದೊಡ್ಡದಿರಲಿಲ್ಲ. ಹೀಗಿದ್ದಾಗ ಒಮ್ಮೆ ಯಾವುದೋ ಬ್ಲಾಗ್ ನಲ್ಲಿ ಅಲೆಯುತ್ತಿದ್ದಾಗ ಕಣ್ಣಿಗೆ ಬಿದ್ದಿದ್ದು ರವಿ ಬೆಳಗೆರೆಯವರ 'ಹೇಳಿಹೋಗು ಕಾರಣ"

ಅಲ್ಲಿ 'ಕಾದಂಬರಿ ಚೆನ್ನಾಗಿದೆ' ಎಂದಷ್ಟೇ ಹೇಳದೆ ಅದರ ಬಗ್ಗೆ ನಾಲ್ಕಾರು ಸಾಲುಗಳ ಸಂಕ್ಷಿಪ್ತ ಪರಿಚಯವನ್ನೂ ನೀಡಿದ್ದರು. ಕುತೂಹಲದಿಂದ ಕೊಂಡು ಓದಿದೆ, ಅದ್ಭುತವಾಗಿತ್ತು! ಅಂತೂ ಇಂತೂ ಯಾರೋ ಪುಣ್ಯಾತ್ಮನ ದಯೆಯಿಂದ ಕನ್ನಡದ ಅತ್ಯುತ್ತಮ ಪ್ರೇಮಕಾದಂಬರಿಯೊಂದನ್ನು ಓದುವಂತಾಯಿತು. ಮುಂದೆ ಪೂಚಂತೇ, ರವಿ ಬೆಳಗೆರೆ, ಜೋಗಿ, ಎ.ಆರ್.ಮಣಿಕಾಂತ್, ಚಕ್ರವರ್ತಿ ಸೂಲಿಬೆಲೆ, ವಸುಧೇಂದ್ರ, ಸುಮತೇಂದ್ರ ನಾಡಿಗ್.... ಹೀಗೆ ಹತ್ತಾರು ಲೇಖಕರ ಹಲವಾರು ಕೃತಿಗಳನ್ನು ಓದಿದ್ದೂ ಕೂಡಾ ಹೀಗೇ. ಅಲ್ಲಿ ಇಲ್ಲಿ ಓದಿದ, ಹೇಳಿದ, ಕೇಳಿದ ಆಧರದಮೇಲೇ...

ನಿಜಕ್ಕೂ ಆಶ್ಚರ್ಯವಾಗುತ್ತದೆ. ಕನ್ನಡದಲ್ಲಿ ಎಷ್ಟೆಲ್ಲಾ ಅದ್ಭುತವಾದ ಪುಸ್ತಕಗಳಿವೆ; ಆದರೆ ಯಾಕೆ ಇವೆಲ್ಲಾ ಮನೆಮಾತಾಗುತ್ತಿಲ್ಲ? ಏಕೆಂದರೆ ಓದುಗರು, ಒಂದು ಸಿನೆಮಾ ನೋಡಿ "ಸಖತ್ತಾಗಿದೆ ಗುರೂ, ಮಿಸ್ ಮಾಡದೇ ಹೋಗಿ ನೋಡು" ಎನ್ನುವ ಸಿನೆಮಾ ಪ್ರೇಕ್ಷಕರಂತಲ್ಲ! ಓದೆಬಲ್ ಪುಸ್ತಕದ ಹೆಸರೊಂದು ನೋಡೆಬಲ್ ಸಿನೆಮಾದಷ್ಟು ತ್ವರಿತವಾಗಿ ಪ್ರಸಾರವಾಗುವುದಿಲ್ಲ. ಓದುತ್ತೇವೆ, ಖುಷಿಪಡುತ್ತೇವೆ,ಮಡಿಚಿಡುತ್ತೇವೆ. ಅಲ್ಲಿಗೆ ಮುಗಿಯಿತು. ಅದಕ್ಕೂ ಒಂದು ಕಾರಣವಿದೆ: ನಮ್ಮ ಫ್ರೆಂಡ್ ಸರ್ಕಲ್ ನಲ್ಲಿ 'ಈ ಪುಸ್ತಕ ಅದ್ಭುತವಾಗಿದೆ ಓದು' ಎನ್ನುವ ಮಾತನ್ನು ಕೇಳಿಸಿಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯಿರುತ್ತದೆ!

ಇನ್ನೂ ಮಾಡಬೇಕಿರುವ ಸಣ್ಣ ಪ್ರಯತ್ನಕ್ಕೆ ಇಷ್ಟೆಲ್ಲಾ ಪೀಠಿಕೆ ಬೇಕಾ ಎಂದು ಮೂಗು ಮುರೀತಿದೀರಾ? ಸರಿ ಹಾಗಾದ್ರೆ...ವಿಷಯಕ್ಕೆ ಬರ್ತೀನಿ. 'ಕನ್ನಡ ಪುಸ್ತಕಗಳು' ಅಂತ ಹೊಸದೊಂದು ಬ್ಲಾಗ್ ತೆರೆದು ನಾನು ಇದುವರೆಗೆ ಓದಿ ಇಷ್ಟಪಟ್ಟ ಪುಸ್ತಕಗಳನ್ನು ಒಂದೊಂದಾಗಿ ಹೆಸರಿಸಿ, ಅದರೊಳಗಿನ ವಸ್ತುವಿನ ಬಗ್ಗೆ ನಾಲ್ಕು ಸಾಲು ಬರೆದು, ಪ್ರಕಾಶಕರ ಹಾಗೂ ಲಭ್ಯವಿರುವ ಮಾರಾಟ ಮಳಿಗೆಗಳ ವಿವರಗಳನ್ನು (ನನ್ನ ತಿಳುವಳಿಕೆಯ ವ್ಯಾಪ್ತಿಯೊಳಗೆ) ಹಾಕಬೇಕೆಂದುಕೊಂಡಿದ್ದೇನೆ. 'ಪುಸ್ತಕ ಪ್ರೀತಿಯನ್ನು ಹರಡುವುದಕ್ಕೆ ಪರವಾನಗಿ ಬೇಕಿಲ್ಲ' ಎನ್ನುವ, ನಾನು ಈಗಷ್ಟೇ ರೂಪಿಸಿದ (!) ಹೊಚ್ಚ ಹೊಸ ನಿಯಮದಡಿಯಲ್ಲಿ ಈ ಶುಭಕಾರ್ಯಕ್ಕೆ ಮುನ್ನುಡಿ ಬರೆಯುತ್ತಿದ್ದೇನೆ.

ಮೊದಲೇ ಹೇಳಿದಂತೆ ಕನ್ನಡದಲ್ಲಿ ಇದು ಮೊದಲ ಪ್ರಯತ್ನವೇನೂ ಅಲ್ಲ. 'ಒಂದು ಸಣ್ಣ ಪ್ರಯತ್ನ (www.sannaprayathna.com)' ಹೆಸರಿನಲ್ಲಿ ಈಗಾಗಲೇ ಸಾಹಿತ್ಯ ಪ್ರೇಮಿಯೊಬ್ಬರು ಕಳೆದ ಕೆಲವರ್ಷಗಳಿಂದ ಈ ದಿಶೆಯಲ್ಲಿ ಉಪಯುಕ್ತ ಪ್ರಯತ್ನ ನಡೆಸುತ್ತಾ ಬಂದಿದ್ದಾರೆ. ಅವರ ಮಟ್ಟಕ್ಕೆ ಅಲ್ಲದಿದ್ದರೂ ನನ್ನ ಇತಿಮಿತಿಯೊಳಗೇ ಸಾಧ್ಯವಾದಷ್ಟು ಹೆಚ್ಚು ಕೃತಿಗಳ ಬಗ್ಗೆ ನಾಲ್ಕು ಸಾಲುಗಳನ್ನು ಬರೆಯಬೇಕೆಂಬುದು ಸಧ್ಯದ ಆಸೆ. ಟೀಕೆ, ಟಿಪ್ಪಣಿ, ನೆಗೆಟಿವ್ ಫೀಡ್ ಬ್ಯಾಕ್ ಗಳನ್ನೆಲ್ಲಾ ಖಂಡಿತಾ ಬರೆಯುವುದಿಲ್ಲ. 

ಅಂದಹಾಗೇ ಇದು ನಾನು ಓದಿದ ಕೃತಿಗಳ ವಿಮರ್ಷೆಯಂತೂ ದೇವರಾಣೆಗೂ ಅಲ್ಲ. ವಿಮರ್ಷೆಯ ಅಆಇಈ ಸಹಾ ನನಗೆ ಗೊತ್ತಿಲ್ಲ. ಇದೇನಿದ್ದರೂ ಮೇಲೆ ಹೇಳಿದಂತೆ ಒಳ್ಳೆಯ ಸಿನಿಮಾ ನೋಡಿದವನೊಬ್ಬ ತನ್ನ ಗೆಳೆಯನಿಗೆ ಹೇಳುವ "ಸಖತ್ತಾಗಿದೆ, ಒಂದ್ಸಲ ನೋಡು ಗುರೂ" ಎನ್ನುವ ಸಣ್ಣ ಪುಷ್ ಅಪ್ ಪ್ರಯತ್ನವಷ್ಟೇ. ಇಲ್ಲದ ಬಿಡುವಿನ ಮಧ್ಯೆ ಇದಕ್ಕೆಲ್ಲಿಂದ ಸಮಯ ಸಿಗುತ್ತದೋ ದೇವರೇ ಬಲ್ಲ. ಅಲ್ಲದೇ ನಾನು ಓದಿರುವ ಪುಸ್ತಕಗಳ ಸಂಖ್ಯೆಯೂ ತೀರಾ ಅತ್ಯಲ್ಪ. ಹೀಗೆ ಹತ್ತಾರು 'ಇಲ್ಲ'ಗಳನ್ನಿಟ್ಟುಕೊಂಡೇ ಈ ಪ್ರಯತ್ನಕ್ಕಿಳಿಯುತ್ತಿದ್ದೇನೆ- ಕೆಲ ಓದುಗರಿಗಾದರೂ ಉಪಯೋಗವಾದೀತೆಂಬ ಮಹದಾಸೆಯೊಂದಿಗೆ; ನಿಮ್ಮ ಬೆಂಬಲದೊಂದಿಗೆ. 

ಆಗಾಗ ಬರ್ತೀರಲ್ವಾ?

ನಿಮ್ಮ ಬರುವಿನ ನಿರೀಕ್ಷೆಯಲ್ಲಿ
-ವಿನಾಯಕ ಅರಳಸುರಳಿ.

(Key words: Kannada pustakagalu, Kannada novels, kannada literature, Some good books of kannada, view of some kannada books)

No comments:

Post a Comment