Tuesday 3 January 2017

ಹುಲಿಯ ನೆನಪುಗಳು (ಲೇ: ಟೈಗರ್ ಬಿ.ಬಿ. ಅಶೋಕ್ ಕುಮಾರ್)


Huliya nenapugalu (Tiger B.B. Ashok Kumar) ನಿಮಗೆಲ್ಲಾ ಅಶೋಕ್ ಕುಮಾರ್ ಗೊತ್ತಿರಬೇಕಲ್ಲಾ? ಕೆಲ ವರ್ಷಗಳ ಕೆಳಗೆ ವಿಜಯ ಕರ್ನಾಟಕದಲ್ಲಿ 'ಬುಲೆಟ್ ಸವಾರಿ' ಅಂಕಣ ಬರೆಯುವ ಮೂಲಕ ಲೇಖಕರಾಗಿಯೂ ಪ್ರಸಿದ್ಧಿ ಪಡೆದ ನಿವೃತ್ತ ಎಸಿಪಿ ಟೈಗರ್ ಅಶೋಕ್ ಕುಮಾರ್! ಇವರ ವೃತ್ತಿ ಜೀವನದ ಅವಧಿಯಲ್ಲಿ ನಡೆದ ನೈಜ ಘಟನೆಗಳ ಆಧಾರದಮೇಲೆ ಒಟ್ಟು ನಾಲ್ಕು ಕನ್ನಡ ಸಿನೆಮಾಗಳು ತೆರೆಕಂಡಿವೆ. ಅವು ಅಮಾನುಷ', 'ಸರ್ಕಲ್ ಇನ್ಪೆಕ್ಟರ್', 'ಡೆಡ್ಲಿ ಸೋಮ' ಹಾಗೂ 'ಮೈನಾ'. ನಾನೀಗ ಹೇಳಹೊರಟಿರುವುದು ಅವುಗಳ ಬಗ್ಗೆಯಲ್ಲ; ಲೇಖಕರು ತಾವು ವೀರಪ್ಪನ್ ಬೇಟೆಯಲ್ಲಿ ತೊಡಗಿದ್ದ ಎಸ್.ಟಿ.ಎಫ್.ತಂಡದಲ್ಲಿ ಸೇವೆ ಸಲ್ಲಿಸುತ್ತಿದ್ದಾಗಿನ ಅನುಭವಗಳ ಬಗ್ಗೆ (೧೯೯೦ ರಿಂದ ೧೯೯೪ರ ತನಕ) ಬರೆದ ರೋಚಕ ಘಟನೆಗಳ ಸಂಕಲನವಾದ 'ಹುಲಿಯ ನೆನಪುಗಳು' ಬಗ್ಗೆ.

ಅಂದಹಾಗೇ ವೀರಪ್ಪನ್ ನಿಮಗೆಲ್ಲಾ ಗೊತ್ತಲ್ವಾ? ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಸುಮಾರು ೧೮ಸಾವಿರ ಚದರ ಕಿಲೋಮೀಟರ್ ನ ದಟ್ಟ ಕಾಡಿನತುಂಬಾ ಅಷ್ಟೇ ದಟ್ಟವಾದ ಮೀಸೆಬಿಟ್ಟುಕೊಂಡು, ಕೈಯ್ಯಲ್ಲಿ ಮಾರುದ್ದದ ಬಂದೂಕು ಹಿಡಿದು 'ಕಾಟ್ಟು ರಾಜ' ಎಂದು ತನಗೆ ತಾನೇ ಹೆಸರಿಟ್ಟುಕೊಂಡು ಓಡಾಡಿಕೊಂಡಿದ್ದ, ಕೈಯ್ಯಲ್ಲಿರುವ ಬಂದೂಕಿನಷ್ಟೇ ಪೇತಲನಾಗಿದ್ದ 'ನರಹಂತಕ ವೀರಪ್ಪನ್' ಯಾರೆಂದು ಗೊತ್ತಿಲ್ಲದ ಕನ್ನಡಿಗರು ಹಾಗೂ ತಮಿಳಿಗರು ಸಿಗುವುದು ಕಡಿಮೆಯೇ. ಹೆಚ್ಚೂ ಕಡಿಮೆ ಒಂದೂವರೆ ದಶಕದ ಕಾಲ ಮೂರು ರಾಜ್ಯಗಳ ಪೋಲೀಸರ ವಾಂಟೆಡ್ ಪಟ್ಟಿಯಲ್ಲಿ ಮೊದಲಿಗನಾಗಿದ್ದುಕೊಂಡು, ಒಂಬೈನೂರಕ್ಕೂ ಹೆಚ್ಚು ಆನೆಗಳನ್ನು ಬೇಟೆಯಾಡಿ, ಲೆಕ್ಕವಿಲ್ಲದಷ್ಟು ಗಂಧದ ಮರಗಳ ಕಳ್ಳಸಾಗಾಣಿಕೆ ಮಾಡಿ, ತೊಂಭತ್ತು ಪೋಲೀಸರ ಹಾಗೂ ಎಂಭತ್ತಕ್ಕೂ ಹೆಚ್ಚು ನಾಗರಿಕರ  ಮಾರಣಹೋಮ ನಡೆಸಿ, ಕೊನೆಗೆ ೨೦೦೫ರಲ್ಲಿ ವಿಜಯ್ ಕುಮಾರ್ ಸಾರಥ್ಯದ 'ತಮಿಳ್ನಾಡು ಸ್ಪೆಶಲ್ ಟಾಸ್ಕ್ ಫೋರ್ಸ್'ನ ಗುಂಡೇಟಿಗೆ ಬಲಿಯಾದ 'ಕಾಟ್ಟು ರಾಜ' (ಕಾಡಿನ ರಾಜ)ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?

ಅಶೋಕ್ ಕುಮಾರ್ ಅವರ ಪೋಲೀಸ್ ವೃತ್ತಾಂತಗಳ ರೋಚಕ ಘಟನೆಗಳಿರುವ 'ಬುಲೆಟ್ ಸವಾರಿ' ಈಗಾಗಲೇ ಪ್ರಕಟವಾಗಿದೆ. ಅದರ ಎರೆಡನೇ ಭಾಗವೇ ಈ 'ಹುಲಿಯ ನೆನಪುಗಳು' ಅರ್ಥಾತ್ ಬುಲೆಟ್ ಸವಾರಿ ೨. ಹಾಗಂತ ಇದೇನೂ ವೀರಪ್ಪನ್ ನ ಕಥೆಯಲ್ಲ; ವೀರಪ್ಪನ್ ನನ್ನು ಹಿಡಿಯಲು ಪ್ರಾಣವನ್ನೇ ಪಣವಾಗಿಟ್ಟು ಹೋರಾಡಿ, ಕೊನೆಗೆ ಅವನ ಸಂಚಿಗೆ ಬಲಿಯಾಗಿಹೋದ ಹತ್ತಾರು ಪೋಲೀಸರ 'ಶಹೀದ್ ಕಹಾನಿ'. ೧೯೯೦ ರಲ್ಲಿ ಎಸ್.ಟಿ.ಎಫ್. ಸೇರಿಕೊಂಡಾಗಿನಿಂದ ಹಿಡಿದು ೧೯೯೪ರಲ್ಲಿ ಎಸ್.ಟಿ.ಎಫ್. ಅನ್ನು ತೊರೆಯುವತನಕ ಟೈಗರ್ ಅಶೋಕ್ ಕುಮಾರ್ ಹಾಗೂ ಅವರ ಸಹೋದ್ಯೋಗಿ ಪಡೆಗಳು ವೀರಪ್ಪನ್ ನೊಂದಿಗೆ ಮುಖಾಮುಖಿಯಾದ ಹಲವಾರು ರಕ್ತಸಿಕ್ತ ಅಧ್ಯಾಯಗಳು ಇಲ್ಲಿವೆ. ಕನ್ನಡದಲ್ಲಿ ಪತ್ತೇದಾರಿ, ಥ್ರಿಲ್ಲರ್ ಕಥಾವಸ್ತುವಿರುವ ಕೃತಿಗಳು ಹಲವಾರು ಬಂದಿವೆಯಾದರೂ ಅಂತಹಾ ಸನ್ನಿವೇಶಗಳಲ್ಲಿ ಸ್ವತಃ ಭಾಗಿಯಾದ ವ್ಯಕ್ತಿಯೊಬ್ಬರು ತಮ್ಮ ಅನುಭವಗಳನ್ನು ತಾವೇ ದಾಖಲಿಸಿದ ಕಥಾನಕಗಳು ಕಡಿಮೆಯೆಂದೇ ಹೇಳಬೇಕು. ಈ ನಿಟ್ಟಿನಲ್ಲಿ 'ಹುಲಿಯ ನೆನಪುಗಳು' ಒಂದು ವಿಭಿನ್ನ ಕೃತಿ.  

ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿರುವ ಗೋಪಿನಾಥಂಗೆ ಬಂದು ನೆಲೆಸುವ ಕೂಸೆ ಮುನಿಸ್ವಾಮಿಯ ಎರೆಡನೇ ಮಗ ವೀರಪ್ಪನ್ ಬೆಳೆಯುತ್ತಾ ಬೆಳೆಯುತ್ತಾ ಮೊದಲು ದಂತಚೋರನಾಗುತ್ತಾನೆ; ನಂತರ ಶ್ರೀಗಂಧದ ಕಳ್ಳಸಾಗಣಿಕೆಗಾರನಾಗುತ್ತಾನೆ. ಕೊನೆಗೆ ನರಹಂತಕನಾಗುತ್ತಾನೆ. ಅವನ ಉಪಟಳ ಮಿತಿಮೀರಿದಾಗ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ವಿಶೇಷ ಪಡೆ ರಚಿಸುತ್ತವೆ. ಹಾಗೆ ನಿಯೋಜಿಸಲ್ಪಟ್ಟ ಎಸ್.ಟಿ.ಎಫ್.ಗೆ (ಸ್ಪೆಶಲ್ ಟಾಸ್ಕ್ ಫೋರ್ಸ್) ಆಯ್ಕೆಯಾದವರಲ್ಲಿ ಟೈಗರ್ ಅಶೋಕ್ ಕುಮಾರ್ ಸಹಾ ಒಬ್ಬರು. 

ವೀರಪ್ಪನ್ ಬಗ್ಗೆ ನಾವು ಈವರೆಗೆ ಕೇಳದ ಅನೇಕ ಅಚ್ಚರಿಯ ಸತ್ಯಗಳನ್ನು ಅಶೋಕ್ ಕುಮಾರ್ ಬಿಚ್ಚಿಡುತ್ತಾ ಹೋಗಿದ್ದಾರೆ. ವೀರಪ್ಪನ್ ಬೆದೆಗೆ ಬಂದ ಹೆಣ್ಣಾನೆಯಂತೆ ಕೂಗಿ ಗಂಡಾನೆಯನ್ನು ಬಳಿಗೆ ಕರೆದು, ಅದರ ಹಣೆಗೆ ಗುಂಡಿಟ್ಟು ಕೊಲ್ಲುವ ಪಾಕಡಾ ಮನುಷ್ಯ; ಗೊಂಡಾರಣ್ಯದ ಮಧ್ಯದಲ್ಲಿರುವ ಗುಹೆಯನ್ನೇ ಪಟ್ಟಣದ ಮನೆಯಂತೆ ಸುಸಜ್ಜಿತಗೊಳಿಸಿಕೊಂಡಿದ್ದ ಪ್ರಭಾವಿ; ಸೇತುವೆಯ ಮೇಲೆ ನಿಂತು ಮೀನುಗಳಿಗೆ ಬ್ರೆಡ್ ಎಸೆಯುತ್ತಿದ್ದ ಮಾನವೀಯ ಮುಖದ ಅರಣ್ಯಾಧಿಕಾರಿಯನ್ನು ನಡು ರಸ್ತೆಯಲ್ಲಿ ಹೊಡೆದುರುಳಿಸಿದ ಪರಮಕ್ರೂರಿ; ತನ್ನ ಬಗ್ಗೆ ಮಾಹಿತಿ ನೀಡಿದವರನ್ನು ತುಂಡುತುಂಡು ಮಾಡಿ ಹೊಳೆಗೆಸೆದ ರಕ್ತದಾಹಿ... ಹೀಗೆ ವೀರಪ್ಪನ್ ಕ್ರೂರ ಮುಖಗಳು ಪದರ ಪದರವಾಗಿ ಅನಾವರಣವಾಗಿವೆ. ಮೊದಲು ಸಣ್ಣದಾಗಿ ಕಳ್ಳಸಾಗಣೆ ಆರಂಭಿಸಿದ ಈತನನ್ನು ಬೆಳೆಸಿ, 1986ರಲ್ಲೇ ಸೆರೆಸಿಕ್ಕಿದ್ದವನಿಗೆ ಅಜಾಗರೂಕತೆಯಿಂದ ತಪ್ಪಿಸಿಕೊಳ್ಳುವ ಅವಕಾಶ ಕಲ್ಪಿಸಿ, ಮುಂದಿನ ಅದೆಷ್ಟೋ ಅನಾಹುತಗಳಿಗೆ ಪರೋಕ್ಷವಾಗಿ ಕಾರಣವಾದ ವ್ಯವಸ್ಥೆಯ ಬಗ್ಗೆ ಬೇಸರ ಮೂಡುತ್ತದೆ.

ಕೃತಿಯ ಇನ್ನೊಂದು ಮುಖ್ಯ ಅಂಶ ವೀರಪ್ಪನ್ ಬೇಟೆಗೆ ಹೊರಟ ಪೋಲೀಸರ ಸ್ಥಿತಿ-ಗತಿ. ಯಾವುದೇ ಕ್ಷಣದಲ್ಲಿ ಬೇಕಾದರೂ, ಯಾವುದೇ ದಿಕ್ಕಿನಿಂದಲಾದರೂ ವೀರಪ್ಪನ್ ನ ಗುಂಡುಗಳು ತೂರಿಬಂದು ತಮ್ಮ ಪ್ರಾಣ ಕಳೆಯಬಹುದಾದ ವಿಷಮ ಸ್ಥಿತಿಯಲ್ಲೂ ದಿಟ್ಟವಾಗಿ ಹೋರಾಡಿದ ಅನೇಕ ಧೀರ ಅಧಿಕಾರಿಗಳ ಕಥೆಗಳು ಇಲ್ಲಿವೆ. ಶಾಂತಿಯಿಂದ ವೀರಪ್ಪನ್ ನನ್ನು ಗೆಲ್ಲುವೆನೆಂದುಹೋಗಿ ಬರ್ಬರ ಹತ್ಯೆಗೊಳಗಾದ ಅರಣ್ಯಾಧಿಕಾರಿ ಶ್ರೀನಿವಾಸ್, ಹೆಂಡತಿ ಹಾಗೂ ಎಂಟು ತಿಂಗಳ ಹಸುಗೂಸನ್ನು ನೋಡುವ ಸಂಭ್ರಮದಲ್ಲಿ ಊರಿಗೆ ತೆರಳುತ್ತಾ ಮಾರ್ಗ ಮಧ್ಯದಲ್ಲಿ ವೀರಪ್ಪನ್ ನ ಮೋಸದ ಧಾಳಿಗೆ ಬಲಿಯಾದ ಎಸ್.ಐ. ಉತ್ತಪ್ಪ, ವೀರಪ್ಪನ್ ಸಾಯುವ ತನಕ ಮದುವೆಯಾಗಲಾರೆನೆಂದು ಪಣ ತೊಟ್ಟು, ಮದುವೆಯಾಗಲಿರುವ ಹುಡುಗಿಯ ಫೋಟೋವನ್ನು ಪರ್ಸಿನಲ್ಲಿಟ್ಟುಕೊಂಡು ಮೌನವಾಗಿ ಪ್ರೇಮಿಸುತ್ತಾ, ಕೊನೆಗೆ ಅದೇ ಮೌನದಲ್ಲಿ ಲೀನವಾಗಿಹೋದ ಶಕೀಲ್.... ಹೀಗೆ ಕಾಡುಗಳ್ಳನ ಕ್ರೌರ್ಯಕ್ಕೆ ಕಮರಿಹೋದ ಹತ್ತಾರು ಕನಸುಗಳ ಸಜೀವ ಚಿತ್ರಣ ಕಣ್ಣು ಒದ್ದೆಯಾಗಿಸುವಂತಿದೆ.

ಈ ಸಾಲು ಸಾಲು ಆಘಾತಗಳ ನಡುವೆಯೂ ಒಂದು ಕೈಯ್ಯಲ್ಲಿ ಬಂದೂಕು ಹಾಗೂ ಇನ್ನೊಂದರಲ್ಲಿ ಜೀವ ಹಿಡಿದುಕೊಂಡು, ಗೊಂಡಾರಣ್ಯದ ನಡುವೆ ಹಗಲು ರಾತ್ರೆಯೆನ್ನದೇ 'ಕೂಂಬಿಂಗ್'ಮಾಡುತ್ತಾ ವೀರಪ್ಪನ್ ನ ನಿದ್ರೆಗೆಡಿಸುವ ಅಶೋಕ್ ಕುಮಾರ್ ಸಹಿತ ಉಳಿದ ಎಸ್.ಟಿ.ಎಫ್. ಸಿಬ್ಬಂದಿ, ತಮ್ಮ ಚಾಣಾಕ್ಷ ತಂತ್ರಗಳ ಮೂಲಕ ವೀರಪ್ಪನ್ ನ ಸಹಚರರನ್ನು ಒಬ್ಬೊಬ್ಬರನ್ನಾಗಿ ಬೇಟೆಯಾಡಿ ಅವನನ್ನು ದುರ್ಬಲಗೊಳಿಸಿದ ಶಂಕರ ಮಹದೇವ ಬಿದರಿ ಹಾಗೂ ಅವರ ತಂಡ.... ಹೀಗೆ 'ಅಟ್ಟಹಾಸ' ಚಿತ್ರದಲ್ಲಿ ಹೇಳದೇಹೋದ ಅನೇಕ ಪ್ರಮುಖ ಸಂಗತಿಗಳು ಇಲ್ಲಿ ಹೇಳಲ್ಪಟ್ಟಿವೆ. ಕೊನೆಯಲ್ಲಿ ಬರುವ ದೊರೆಸ್ವಾಮಿಯ ಎನ್ಕೌಂಟರ್ ಅಧ್ಯಾಯವಂತೂ ರೋಚಕವಾಗಿದೆ. 

'ಹುಲಿಯ ನೆನಪುಗಳು' ಕೇವಲ ದುರಂತ ಘಟನೆಗಳ ವರದಿಯಲ್ಲ; ನರಹಂತಕನ ಅಟ್ಟಹಾಸದ ಪರಮಾವಧಿಯ ಚಿತ್ರಣವೂ ಅಲ್ಲ; ಅರಣ್ಯಾಧಿಕಾರಿಗಳು ಹಾಗೂ ಅರಕ್ಷಕರ ಶೌರ್ಯ, ಸಾಹಸಗಳ ಮೆರವಣಿಗೆಯೂ ಅಲ್ಲ. ಇದು  ರಾಕ್ಷಸರ ಹಾಗೂ ರಕ್ಷಕರ ನಡುವಿನ ಸುಧೀರ್ಘ ಹೋರಾಟದ ಸಂದರ್ಭಸಹಿತ ವಿಶ್ಲೇಷಣಾತ್ಮಕ ಸಾಹಿತ್ಯ. ಯಾವುದೇ ಅತಿರೇಕಗಳಿಲ್ಲದೇ, ಎಲ್ಲಿಯೂ ಕ್ರೌರ್ಯ-ಸಾಹಸಗಳ ವಿಜ್ರಂಭಣೆಯಿಲ್ಲದೇ, ಪ್ರತಿಯೊಂದು ಘಟನೆಯನ್ನೂ ವಿಶ್ಲೇಷಣಾತ್ಮಕ ಹಿನ್ನೆಲೆಗಳ ಜೊತೆಗೆ ಮನೋಜ್ಞವಾಗಿ ಬರೆದಿದ್ದಾರೆ ಟೈಗರ್ ಬಿ. ಅಶೋಕ್ ಕುಮಾರ್. ಬಂದೂಕು ಹಿಡಿದ ಕೈ ಲೇಖನಿ ಹಿಡಿದು ಘರ್ಜಿಸಿದ ಪರಿಯನ್ನು ಒಮ್ಮೆ ಓದಿ ಸವಿಯಿರಿ.

ಕೃತಿಯ ವಿವರಗಳು:
ಹೆಸರು: ಹುಲಿಯ ನೆನಪುಗಳು
ಅಡಿಬರಹ: ಟೈಗರ್ ಬಿ.ಬಿ. ಅಶೋಕ್ ಕುಮಾರ್ ಅವರ ಪೋಲೀಸ್ ವೃತ್ತಾಂತಗಳು.
ಲೇಖಕರು: ಟೈಗರ್ ಬಿ.ಬಿ. ಅಶೋಕ್ ಕುಮಾರ್.
ಪ್ರಕಾಶಕರು: ಸಪ್ನ ಬುಕ್ ಹೌಸ್,
3ನೇ ಮುಖ್ಯರಸ್ತೆ,
ಗಾಂದೀನಗರ,
ಬೆಂಗಳೂರು 560009.
ದೂರವಾಣಿ: 080-40114455.
ಆನ್ ಲೈನ್ ಖರೀದಿಗೆ: www. sapnaonline.com
ಲೇಖಕರ ಇನ್ನಿತರ ಪ್ರಕಟಿತ ಕೃತಿಗಳು: ಬುಲೆಟ್ ಸವಾರಿ.
(Key words: Huliya Nenapugalu, Tiger B.B. Ashok Kumar, Book about Veerappan hunt, S.T.C.)

2 comments:

  1. ಸುಂದರ ಪುಸ್ತಕದ ಸುಂದರ ಪರಿಚಯಕ್ಕೆ ಧನ್ಯವಾದಗಳು ವಿನಾಯಕ..

    ReplyDelete
  2. Olle prayatna!! Swalpa bega bega suggest madi..
    Nan Favourite books kelaw heltini try madi..


    Author : Poornachandra tejaswi

    Theme : Jail break
    1)Mahapalaayana
    2)Papillon 1
    3)Papillon 2
    4)Papillon 3

    Theme : Tiger/Cheetha hunt
    5)Munishami Mattu Magadi Chirate
    6)Rudraprayaagada Bhayaanaka Narabhakshaka
    7)Bellandoorina Narabhakshaka - Kaadina Kathegalu Bhaaga 1
    8)Huliyoorina Sarahaddu, Swaroopa, Nigoodha Manushyaru

    Theme : World war
    9)Mahayuddha-1
    10)Mahayuddha-2
    11)Mahayuddha-3


    Author : Ravi belagere

    Theme : Indo-China war. Reason behind India's loss & How Indian army fought the war in its worst condition.
    1)Himalayan blunder

    Theme : True story About Indian RAW agent
    2)Himagni

    Theme : True story About bangalore underworld. Author Face2Face interview with underworld people.
    3)Paapigala lokadalli

    Theme : story about Dawood and Mumbai blast
    4)Black friday

    Author : KN Ganeshayya

    Theme : Fiction story about treasue hunt
    1) Karisiriyana
    2) Kanaka Musuku
    3) Mooka dhatu

    ReplyDelete