Sunday 12 February 2017

ತುಳಸೀದಳ (ಯಂಡಮೂರಿ ವೀರೇಂದ್ರನಾಥ್)


Tulaseedala (Yandamoori Virendranath) ನಂಬಿಕೆ-ಮೂಢನಂಬಿಕೆ-ವಿಜ್ಞಾನ.
ನಮ್ಮ ದೈನಂದಿನ ಬದುಕಿನಲ್ಲಿ ನಾವು ಈ ಮೂರರ ನಡುವೆ ಜೀಕುತ್ತಲೇ ಇರುತ್ತೇವೆ. ರೋಗಗ್ರಸ್ತ ಮಗುವೊಂದನ್ನು ದೇವಸ್ಥಾನಕ್ಕೋ ಮಸೀದಿಗೋ ಒಯ್ದು ತಾಯತವನ್ನೂ ಕಟ್ಟಿಸುತ್ತೇವೆ; ಆಸ್ಪತ್ರೆಗೆ ಒಯ್ದು ಮಾತ್ರೆಯನ್ನೂ ತಿನ್ನಿಸುತ್ತೇವೆ. ಜೀವವೊಂದು ಗುಣಮುಖವಾಗಲೆಂದು ದೇವರೆದುರು ಹೇಗೆ ಕೈ ಮುಗಿದು ಬೇಡುತ್ತೇವೋ ಹಾಗೇ ಡಾಕ್ಟರೆದುರೂ ದೀನರಾಗಿ ನಿಲ್ಲುತ್ತೇವೆ. ಡಾಕ್ಟರನ್ನೂ ದೇವರೆನ್ನುತ್ತೇವೆ. ದೇವರಿಂದಲೂ ಡಾಕ್ಟರಿಕೆಯನ್ನು ನಿರೀಕ್ಷಿಸುತ್ತೇವೆ! ಹೀಗೆ ಮನುಷ್ಯ ನಂಬಿಕೆ-ಮೂಢನಂಬಿಕೆ-ವಿಜ್ಞಾನ ಮೂರರಿಂದಲೂ ತನ್ನ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಲೇ ಇರುತ್ತಾನೆ. ಆದರೆ ಇವುಗಳಲ್ಲಿ ಯಾವೊಂದು ಹಳಿತಪ್ಪಿದರೂ ಆಗುವ ದುರಂತದ ಚಿತ್ರಣವೇ ಯಂಡಮೂರಿ ವೀರೇಂದ್ರನಾಥ್ ಅವರ 'ತುಳಸೀದಳ'.

1990ರ ದಶಕದಿಂದಲೂ ತಾರ್ಕಿಕ, ವೈಜ್ಞಾನಿಕ ಹಾಗೂ ಭಾವುಕ ಅಂಶಗಳನ್ನು ಪರಸ್ಪರ ಪೋಣಿಸುತ್ತಾ ಅದ್ಭುತ ಕಾದಂಬರಿಗಳ ಮಾಲೆಕಟ್ಟುತ್ತಾ ಬಂದಿರುವ ಯಂಡಮೂರಿ ವೀರೇಂದ್ರನಾಥ್ ಅವರ ಅತ್ಯತ್ತಮ ಕಾದಂಬರಿಗಳಲ್ಲಿ ಪ್ರಮುಖವಾದುದು ಈ 'ತುಳಸೀದಳ'. ಮೂಲತಃ ತೆಲುಗಿನದಾದ ಈ ಕೃತಿಯನ್ನು ಅತ್ಯಂತ ನಾಜೂಕಾಗಿ ಕನ್ನಡಕ್ಕೆ ತಂದಿರುವವರು 'ವಂಶಿ'. ಕನ್ನಡದಲ್ಲಿ ಇದು ಚಲನಚಿತ್ರವಾಗಿದೆಯೂ ಪ್ರಸಿದ್ಧವಾಗಿದೆ.

ಮಲ್ಟಿ ಮಿಲಿಯನೇರ್ ಆದ ಉದ್ಯಮಿ ರಾಬರ್ಟ್ ತನ್ನ ತಾಯ್ನಾಡಿಗೆ ಮರಳುವಾಗ ತನ್ನ ಆಸ್ತಿಯ ಪೈಕಿ ಇಪ್ಪತ್ತು ಲಕ್ಷವನ್ನು ನಾಯಕ ಶ್ರೀಧರ್ ನ ಪುಟ್ಟ ಮಗಳಾದ ತುಳಸಿಯ ಹೆಸರಿಗೆ ಬರೆಯುತ್ತಾನೆ. ಒಂದುವೇಳೆ ಮಗುವಿಗೆ ಹತ್ತುವರ್ಷ ತುಂಬುವ ಮೊದಲೇ  ಮೃತಪಟ್ಟರೆ ಆ ಆಸ್ತಿ 'ಶ್ರೀ ಕೃಷ್ಣ ಅನಾಥಾಲಯ'ಕ್ಕೆ ಸೇರಬೇಕೆಂದು ಬರೆದಿರುತ್ತಾನೆ. ಎಂಭತ್ತು ಅನಾಥ ಹೆಣ್ಣುಮಕ್ಕಳ ಪೋಷಣೆಗೈಯ್ಯುತ್ತಿರುವ ಅನಾಥಾಲಯದ ಮೇಲ್ವಿಚಾರಕರಾದ ಸ್ವಾಮಿ, ಸರಸ್ವತೀಚಂದ್ರ ಹಾಗೂ ಕೊಲೆಗಡುಕ ಪುಟ್ಟ ಆಸ್ತಿಗಾಗಿ ತುಳಸಿಯ ಪ್ರಾಣ ಕಳೆಯುವ ಸಂಚುಹೂಡುತ್ತಾರೆ. ತಮ್ಮ ಮೇಲೆ ಅನುಮಾನ ಬರದಂತೆ ಕಥೆ 'ಮುಗಿಸಲು' ಅವರು ಆಯ್ದುಕೊಳ್ಳುವ ವಾಮಮಾರ್ಗವೇ ಇಪ್ಪತ್ತೊಂದು ದಿನ ಬಲಿಯನ್ನು ನಾನಾ ರೋಗಗಳಿಗೆ ಗುರಿಮಾಡಿ ಕೊನೆಯದಿನ ಮರಣಕ್ಕೀಡುಮಾಡುವ 'ಕಾಶ್ಮೋರಾ' ಪ್ರಯೋಗ. ಇದಕ್ಕೆ ನೆರವಾಗುವವನು ಒರಿಸ್ಸಾದ ಬಿಸ್ತಾದಲ್ಲಿರುವ ಮಾಂತ್ರಿಕ ಕಾದ್ರಾ.

ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಮೂಲಕ ಓದುಗನನ್ನು ಥ್ರಿಲ್ ಗೊಳಿಸುತ್ತಲೇ ಯೋಚನೆಗೆ ಹಚ್ಚುವ ವಿಶಿಷ್ಟ ಕಾದಂಬರಿ 'ತುಳಸೀದಳ'. ಒಂದೊಂದು ಅಧ್ಯಾಯವೂ ಕೌತುಕಗಳಿಂದ ಕೂಡಿದ್ದು ಮನಸ್ಸಿನ ಯೋಚನಾ ಲಹರಿಗೆ ಬೇರೆಯದೇ ದಾರಿ ತೋರಿಸುತ್ತವೆ. ಮ್ಯಾಜಿಕ್ ನ ಹುಚ್ಚು ಹಿಡಿಸಿಕೊಂಡು ಪಾಡುಪಡುವ ಅಬ್ರಕದಬ್ರ, ದೇವರು-ದೆವ್ವಗಳ ಮೇಲಿನ ತನ್ನ ಅತೀವ ಅಪನಂಬಿಕೆಗೆ ಬೆಲೆತೆರುವ ನಾಯಕ ಶ್ರೀಧರ್, ಮೂಢನಂಬಿಕೆಗೆ ಬಲಿಯಾಗುವ ಮುಗ್ಧೆ ಅನಿತಾ, ಮನುಷ್ಯನ ಅಜ್ಞಾನವನ್ನೇ ಬಂಡವಾಳವಾಗಿಸಿಕೊಂಡ ಪುಟ್ಟ, ಸರಸ್ವತಿ ಯಂತಹ ದುಷ್ಟರು, ತಮ್ಮ ಪೇಶಂಟ್ ನ ಉಳಿವಿಗಾಗಿ ಜೀವ ಪಣಕ್ಜಿಟ್ಟು ಹೋರಾಡುವ ಡಾಕ್ಟರುಗಳಾದ ಪಾರ್ಥಸಾರಥಿ, ಜಯದೇವ್.... ಹೀಗೆ ನಮ್ಮ ನಡುವೆ ಜೀವಂತವಾಗಿರುವ ವ್ಯಕ್ತಿತ್ವಗಳೇ ಇಲ್ಲಿ ಪಾತ್ರಗಳಾಗಿವೆ. ವಾಮಾಚಾರ, ವೈದ್ಯವಿಜ್ಞಾನ, ಮನೋವಿಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್ ನಂತಹ ಸಂಕೀರ್ಣ ವಿಷಯಗಳನ್ನು ಅತ್ಯಂತ ಸರಳವಾಗಿ, ಅಷ್ಟೇ ಕುತೂಹಲಭರಿತವಾಗಿ ಕತೆಯೊಂದಿಗೆ ಬೆರೆಸಿರುವುದು ಲೇಖಕರ ಜಾಣ್ಮೆ, ತಾಳ್ಮೆ ಹಾಗೂ ಕೌಶಲ್ಯಗಳಿಗೆ ಸಾಕ್ಷಿ. ಕಥೆಯ ಕೊನೆಯನ್ನು ಅತ್ತ ವಾಮಾಚಾರದ ಹಾದಿಯಿಂದಲೂ, ಇತ್ತ ವೈಜ್ಞಾನಿಕ ಲಾಜಿಕ್ ಗಳಮೇಲೂ ತಂದು, ಯಾವುದೂ ಅತಿ ನಾಟಕೀಯವಾಗದಂತೆ ಎರೆಡನ್ನೂ ಒಂದೇ ಅಂತ್ಯದಲ್ಲಿ ಪೋಣಿಸಿರುವ ಬಗೆ ನಿಜಕ್ಕೂ ಅಮೋಘ. ಲೇಖಕರ ವಿಶಿಷ್ಟ ಶೈಲಿಯಿಂದಾಗಿ ಹಾಗೂ ತಾರ್ಕಿಕ ಅಂಶಗಳಿಂದಾಗಿ'ತುಳಸೀದಳ' ಇನ್ನುಳಿದ ಮಾಟ-ಮಂತ್ರದ ಕಾದಂಬರಿಗಳಿಗಿಂತ ಭಿನ್ನವಾಗಿ ಓದಿಸಿಕೊಳ್ಳುತ್ತದೆ. ಈ ಅದ್ಭುತ ಕಾದಂಬರಿಯನ್ನು ಅಷ್ಟೇ ಅದ್ಭುತವಾಗಿ ಕನ್ನಡಕ್ಕೆ ತಂದ ವಂಶಿಯವರೂ ಈ ಗೆಲುವಿನ ಶ್ರೇಯದಲ್ಲಿ ಸಮಪಾಲುದಾರರು.

ವಿವರಗಳು:
ಕೃತಿ: ತುಳಸೀದಳ.
ಪ್ರಕಾರ: ಕಾದಂಬರಿ
ಲೇಖಕರು: ಯಂಡಮೂರಿ ವೀರೇಂದ್ರನಾಥ್.
ಕನ್ನಡಕ್ಕೆ: ವಂಶಿ
ಪ್ರಕಾಶಕರ ವಿವರ: ಸಾಹಿತ್ಯನಂದನ
ನಂ.9, 4ನೇ 'ಇ' ವಿಭಾಗ,
10 ಎ ಮುಖ್ಯರಸ್ತೆ,
ರಾಜಾಜಿನಗರ, ಬೆಂಗಳೂರು.
080-23507170

ಲೇಖಕರ ಇನ್ನಿತರ ಕೆಲವು ಕೃತಿಗಳು: (ಕನ್ನಡಕ್ಕೆ ಅನುವಾದಿಸಲ್ಪಟ್ಟವು) ಬೆಳದಿಂಗಳ ಬಾಲೆ, ಮಳೆಗಾಲದ ಒಂದು ಸಂಜೆ, ಸಂಪೂರ್ಣ ಪ್ರೇಮಾಯಣ, ಡೈರಿ ಆಫ್ ಮಿಸ್ ಶಾರದಾ, ತುಳಸಿ, ದುಡ್ಡು ದುಡ್ಡು, ಕಪ್ಪಂಚು ಬಿಳಿ ಸೀರೆ, ಧ್ಯೇಯ, ಅಂಧಕಾರದಲ್ಲಿ ಸೂರ್ಯ, ಅಂಕಿತ, ದುಡ್ಡು ಮೈನಸ್ ದುಡ್ಡು, ಭಾರ್ಯ ಗುಣವತಿ ಶತ್ರು, ಅಷ್ಟಾವಕ್ರ, ಬೇಡ ಕೃಷ್ಣ ರಂಗಿನಾಟ.

ಮನೋವೈಜ್ಞಾನಿಕ ಕೃತಿಗಳು:
ವಿಜಯಕ್ಕೆ ಐದು ಮೆಟ್ಟಿಲು, ವಿಜಯಕ್ಕೆ ಆರನೇ ಮೆಟ್ಟಿಲು, ಗ್ರಾಫಾಲಜಿ.

No comments:

Post a Comment