Tuesday, 10 April 2018

ನನಗೂ ಲವ್ವಾಗಿದೆ (ಕೆ. ಗಣೇಶ ಕೋಡೂರು)ಐದನೇ ಕ್ಲಾಸಿನಲ್ಲಿದ್ದಾಗಲೇ ಇವಳೆಷ್ಟು ಚೆಂದ ಇದ್ದಾಳೆ,ಲವ್ ಮಾಡಿದರೆ ಇವಳನ್ನೇ ಲವ್ ಮಾಡಬೇಕು ಎಂದು ಆಸೆ ಪಟ್ಟು ಅವಳನ್ನೇ ನೋಡಿ ನೋಡಿ, ಕ್ಲಾಸಿನಲ್ಲಿ ನಾನು ಹೀಗೆ ಗುರಾಯಿಸಿದ್ದಕ್ಕೆ ಅವಳು ಟೀಚರ್ರಿಗೆ ಹೇಳಿ, ಅವರು ಹೊಡೆದು, ಅದರಿಂದ ಸಿಟ್ಟು ಅವಮಾನವೆಲ್ಲ ಆಗಿ, ಸ್ಕೂಲು ಬಿಟ್ಟು ಮನೆಗೆ ಬರುವಾಗ ಅವಳ ಹಿಂದೇ ಬಂದು ರಸ್ತೆಯಲ್ಲೇ ಅವಳ ಜಡೆ ಹಿಡಿದೆಳೆದು ಸಿಟ್ಟುಕಳೆದುಕೊಂಡು ಮತ್ತೆ ಅವಳೆಡೆಗೆ ಪ್ರೀತಿ ಚಿಮ್ಮಿಸಿಕೊಂಡ ಬದುಕಿನ ಆ ಕ್ಷಣವೇ ಅಲ್ಲವಾ ಅದೇ ಮೊದಲ ಬಾರಿ ಈ ಬದುಕಿನಲ್ಲಿ ನನಗೂ ಲವ್ವಾಗಿದೆ ಅನ್ನಿಸಿದ್ದು...
ಹೀಗೆ ಬದುಕಿನಲ್ಲಿ ಮೊದಲ ಬಾರಿ ಮನೆಯಾಚೆಗೂ ಒಂದು ಪ್ರೀತಿಯಿದೆ ಎಂದು ತೋರಿಸಿಕೊಟ್ಟ ಕೋಡೂರಿನ ಪ್ರೈಮರಿ ಸ್ಕೂಲಿನ ನನ್ನ ಕ್ಲಾಸ್ ಮೇಟ್ ಪುಟ್ಟ ಸುಂದರಿಗೆ ಅರ್ಪಣೆ.

ಹುಟ್ಟಿದ್ದೇವೆ. ಹುಟ್ಟಿದ ನಂತರ ಇನ್ನೂ ಬದುಕಿದ್ದೇವೆ. ಬದುಕಿರುವ ನಮಗೊಂದು ಹೃದಯವಿದೆ, ಮನಸ್ಸಿದೆ. ಒಂದಿಷ್ಟು ಭಾವನೆಗಳಿವೆ, ಕನಸುಗಳಿವೆ. ಬದುಕಿನಲ್ಲಿ ಬೇಜಾನ್ ಆಸೆಗಳಿವೆ ಎಂದೆಲ್ಲ ಅಂದುಕೊಂಡಿರುವ ಎಲ್ಲರಿಗೂ ಈ ಬದುಕಿನ ಒಂದಲ್ಲ ಒಂದು ದಿನ ಪ್ರೀತಿ ಎನ್ನುವುದು ಆಗಲೇಬೇಕು. 
(ಮುನ್ನುಡಿ ಹಾಗೂ ಬೆನ್ನುಡಿಯಿಂದ)

ಪುಸ್ತಕ:ನನಗೂ ಲವ್ವಾಗಿದೆ
ಲೇಖಕರು: ಕೆ. ಗಣೇಶ ಕೋಡೂರು
ಪ್ರಕಾಶಕರು: ಬೆನಕ ಬುಕ್ಸ್  ಬ್ಯಾಂಕ್, ಕೋಡೂರು, ಹೊಸನಗರ, ಶಿವಮೊಗ್ಗ.
ಮೋ: 73384 37666.
ಬೆಲೆ:₹ 50

ಮಾಹಿತಿ ಸಂಗ್ರಹ: ಆದರ್ಶ ಜಯಣ್ಣ.

ಘಾಚರ್ ಘೋಚರ್ (ವಿವೇಕ ಶಾನಭಾಗ)
ಘಾಚರ್ ಘೋಚರ್ ಎಂಬ ನೀಳ್ಗತೆಯು ಇತ್ತೀಚಿಗೆ ಬರೆದುದು ಮತ್ತು ಅದೆಲ್ಲಿಯೂ ಪ್ರಕಟವಾಗಿಲ್ಲ. ಈ ಜಗತ್ತಿನಲ್ಲಿ ಕೆಲವೇ ಜನರಿಗೆ ಮಾತ್ರ ಗೊತ್ತಿರುವ' ಘಾಚರ್ ಘೋಚರ್' ಎಂಬ ಶಬ್ದಯುಗಳದ ಅರ್ಥವನ್ನು ತಿಳಿಯಲು ಇರುವುದು ಒಂದೇ ಮಾರ್ಗವೆಂದರೆ ಈ ಕತೆ ಓದುವುದು! (ಮುನ್ನುಡಿಯಿಂದ)

ಕನ್ನಡದಲ್ಲಿ ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಪ್ರಕಟವಾಗಿರುವ ಮಹತ್ವದ ಕಾದಂಬರಿ ಗಲ್ಲೊಂದು ಘಾಚರ್ ಘೋಚರ್. ಆಧುನಿಕ ಬೆಂಗಳೂರು ನಗರದ ಜೀವನ ವನ್ನು ಎತ್ತಿಕೊಂಡು ಇಷ್ಟೊಂದು ಸಂವೇದನಾಶೀಲವಾಗಿ, ಸೂಕ್ಷ್ಮವಾಗಿ, ಹೃದಯಂಗಮ ವಾಗಿ  ವಿವೇಚಿಸುವ ಇನ್ನೊಂದು ಕಾದಂಬರಿ ನಮ್ಮಲ್ಲಿ ಬಂದಿಲ್ಲ. (ಗಿರೀಶ್ ಕಾರ್ನಾಡರ ಬೆನ್ನುಡಿ ಯಿಂದ)

ಕೇವಲ ಸಾಂಸಾರಿಕ ರಗಳೆ ಅಥವಾ ಗೋಲುಕರೆಯಾಗಬಹುದಾಗಿದ್ದ ಕಥನವೊಂದು ಮನುಷ್ಯ ಸ್ವಭಾವ ಮತ್ತು ವರ್ತನೆಗಳ ಹಿಂದಿನ ನಿಗೂಢತೆಗೆ ಹಿಡಿದ ಕನ್ನಡಿಯಾಗಿ ಬಿಡುತ್ತದೆ; ಗ್ರಹಿಕೆ ಮತ್ತು ಅಭಿವ್ಯಕ್ತಿಗಳ ಸಾಧ್ಯತೆ ಮತ್ತು ಕಷ್ಟಗಳ ಬಗೆಗಿನ ಧ್ಯಾನವಾಗಿ ಬಿಡುತ್ತದೆ.(ಟಿ.ಪಿ. ಅಶೋಕ್ ಅವರ ಬೆನ್ನುಡಿಯಿಂದ)

 ಪುಸ್ತಕ: ಘಾಚರ್ ಘೋಚರ್
 ಲೇಖಕ : ವಿವೇಕ ಶಾನಭಾಗ
 ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು.
ಸಾಗರ. ಶಿವಮೊಗ್ಗ (ಜಿ)
( www.aksharaprakashana.com ನಲ್ಲಿ ಖರೀದಿಗೆ ಲಭ್ಯವಿದೆ.)
ಮಾಹಿತಿ ಸಂಗ್ರಹ: ಆದರ್ಶ ಜಯಣ್ಣ.

ಗೌರೀದುಃಖ (ವಿದ್ಯಾರಶ್ಮಿ ಪೆಲ್ಲತ್ತಡ್ಕ)ಹೆಣ್ಣಿನ ಮನವೆನ್ನುವುದು ನವ್ಯ ಕವನದಂತೆ. ಚಂದದ ಪೋಣಿಕೆ, ಸುಂದರ ಹೋಲಿಕೆ, 'ಏನೋ ಹೇಳುತ್ತಿದೆ' ಎನ್ನುವ ಅರೆಬರೆ ತಿಳುವಳಿಕೆ.. ಇವೆಲ್ಲದರಾಚೆಗೂ ಅದು ಪೂರ್ಣ ಅರ್ಥವಾಗದೇ ಉಳಿಯುತ್ತದೆ. ಒಮ್ಮೊಮ್ಮೆ ಓದಿದವರ ಭಾವಕ್ಕೆ ತಕ್ಕಂತೆ, ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಅರ್ಥಕ್ಕೆ ದೊರಕುತ್ತದೆ. ಅಥವಾ 'ಅರ್ಥವಾಯಿತು' ಎನ್ನುವ ಭ್ರಮೆ ಹುಟ್ಟಿಸುತ್ತದೆ. ಹೀಗೆ ತಿರುಗಮುರುಗವೆಂದೆನಿಸುವ ಹೆಣ್ಣಿನ ಮನಕ್ಕೆ ಹಿಡಿದ ನೇರ ಕನ್ನಡಿ ವಿದ್ಯಾರಶ್ಮಿ ಪೆಲತ್ತಡ್ಕ ಅವರ 'ಗೌರೀದುಃಖ' ಕವನಸಂಕಲನ.

'ಖಾಲಿ ಹಣೆ ಕಂಡರೇಕೆ ಅಂಜುವೆ
ಎಲೆ ಗಂಡೆ?
ನನ್ನೊಳಗೆ ನೀ ಇಲ್ಲವಾಗುವ ಕ್ಷಣ
ಭಯ ಪಡು'
        *******
'ದ್ವೇಷವೆಂದರೇನಮ್ಮಾ?
ಪ್ರೀತಿಯಿಲ್ಲದ್ದು ಕಂದಾ'
       ********
'ಒಂದು ಪ್ರೇಮದ ಹಣತೆಯ ಬೆಳಕೂ
ನಿನ್ನ ಕಾಪಿಡಲಿಲ್ಲ;
ಅದು ಹೇಗೆ ಇಷ್ಟು ಬೆಚ್ಚಗಿದ್ದೀ ಅಮ್ಮ?'
       ********
'ಕೊಳೆವ ಗಾಯವ ಹೊರುವ ಹಿಂಸೆಯೇಕೆಂದು
ಹೊರಟುಬಿಟ್ಟಳು ಜಾನಕಿ;
ಭೂಮಿ ಬಾಯ್ತೆರೆಯಿತು,
ಕರುಣಾಳು ರಾಘವ ಹಗುರಾದ'

ಹೀಗೆ 'ಗೌರೀದುಃಖ'ದ ಪ್ರತಿಯೊಂದು ಕವನವೂ ಮೊದಲ ಸಾಲಿನಿಂದಲೇ ನಮ್ಮೊಂದಿಗೆ ಮಾತಿಗೆ ಶುರುವಿಟ್ಟುಕೊಳ್ಳುತ್ತದೆ. ಅಮ್ಮನ ಮುಖದ ಮುದುರುಗಳೊಳಗೆ ಕಳೆದುಹೋದ ಗುಳಿಕೆನ್ನೆ ಮತ್ತೆ ಗೋಚರಿಸತೊಡಗುತ್ತದೆ. ಅಡುಗೆ ಮನೆಯ ಹೊಗೆಯ ನಡುವೆ ಕರಗಿದ ಕನಸಿನ ಘಮವೊಂದು ಮೂಗಿಗೆ ಬಡಿಯತೊಡಗುತ್ತದೆ. ಇದುವರೆಗೆ 'ಶೃಂಗಾರಕ್ಕೆ ಬಳಿದುಕೊಂಡಿದ್ದು' ಎಂದೇ ಭಾವಿಸಿದ್ದ ಅವಳ ಕಣ್ಣ ಕಾಡಿಗೆಯ ಹಿಂದಿನ ನಿಜವಾದ ಅರ್ಥದ ಪರಿಚಯವಾಗುತ್ತದೆ. ಪುಟಾಣಿ ಮಗಳ ಕೈ ಹಿಡಿದು ಹೊರಟ ಅಮ್ಮನ ಪ್ರೀತಿ, ಕಾಳಜಿ, ಆತಂಕ, ನೆನಪುಗಳೆಲ್ಲ ಮಗಳ ಪುಟ್ಟಪುಟ್ಟ ಹೆಜ್ಜೆಗಳಂತೆಯೇ ಕಣ್ಣೆದುರು ಮೂಡತೊಡಗುತ್ತವೆ. ಅಮ್ಮನಾಗಿ, ಅಕ್ಕನಾಗಿ, ಮಡದಿಯಾಗಿ, ಗೆಳತಿಯಾಗಿ ನಮ್ಮ ಜೊತೆಯಲ್ಲೇ ಇರುವ ಹೆಣ್ಣಿನ, ನಾವು ಕಾಣದ ಹೂ ಚಹರೆಗಳು ಕವನ-ಕವನವಾಗಿ ಅರಳುತ್ತವೆ, ಮುದುಡುತ್ತವೆ.

ಒಮ್ಮೆ ಓದಿ...

ಕೃತಿ: ಗೌರೀದುಃಖ
ಲೇಖಕಿ: ವಿದ್ಯಾರಶ್ಮಿ ಪೆಲತಡ್ಕ
ಪ್ರಕಾರ: ಕವನ ಸಂಕಲನ

ಪ್ರಕಾಶಕರು: ಅಭಿನವ,
17/18-2, ಮೊದಲನೇ ಮುಖ್ಯರಸ್ತೆ,
ಮಾರೇನಹಳ್ಳಿ, ವಿಜಯನಗರ,
ಬೆಂಗಳೂರು 40.
ಫೋನ್: 9448804905
080-23505825