Tuesday 10 April 2018

ಗೌರೀದುಃಖ (ವಿದ್ಯಾರಶ್ಮಿ ಪೆಲ್ಲತ್ತಡ್ಕ)



ಹೆಣ್ಣಿನ ಮನವೆನ್ನುವುದು ನವ್ಯ ಕವನದಂತೆ. ಚಂದದ ಪೋಣಿಕೆ, ಸುಂದರ ಹೋಲಿಕೆ, 'ಏನೋ ಹೇಳುತ್ತಿದೆ' ಎನ್ನುವ ಅರೆಬರೆ ತಿಳುವಳಿಕೆ.. ಇವೆಲ್ಲದರಾಚೆಗೂ ಅದು ಪೂರ್ಣ ಅರ್ಥವಾಗದೇ ಉಳಿಯುತ್ತದೆ. ಒಮ್ಮೊಮ್ಮೆ ಓದಿದವರ ಭಾವಕ್ಕೆ ತಕ್ಕಂತೆ, ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಅರ್ಥಕ್ಕೆ ದೊರಕುತ್ತದೆ. ಅಥವಾ 'ಅರ್ಥವಾಯಿತು' ಎನ್ನುವ ಭ್ರಮೆ ಹುಟ್ಟಿಸುತ್ತದೆ. ಹೀಗೆ ತಿರುಗಮುರುಗವೆಂದೆನಿಸುವ ಹೆಣ್ಣಿನ ಮನಕ್ಕೆ ಹಿಡಿದ ನೇರ ಕನ್ನಡಿ ವಿದ್ಯಾರಶ್ಮಿ ಪೆಲತ್ತಡ್ಕ ಅವರ 'ಗೌರೀದುಃಖ' ಕವನಸಂಕಲನ.

'ಖಾಲಿ ಹಣೆ ಕಂಡರೇಕೆ ಅಂಜುವೆ
ಎಲೆ ಗಂಡೆ?
ನನ್ನೊಳಗೆ ನೀ ಇಲ್ಲವಾಗುವ ಕ್ಷಣ
ಭಯ ಪಡು'
        *******
'ದ್ವೇಷವೆಂದರೇನಮ್ಮಾ?
ಪ್ರೀತಿಯಿಲ್ಲದ್ದು ಕಂದಾ'
       ********
'ಒಂದು ಪ್ರೇಮದ ಹಣತೆಯ ಬೆಳಕೂ
ನಿನ್ನ ಕಾಪಿಡಲಿಲ್ಲ;
ಅದು ಹೇಗೆ ಇಷ್ಟು ಬೆಚ್ಚಗಿದ್ದೀ ಅಮ್ಮ?'
       ********
'ಕೊಳೆವ ಗಾಯವ ಹೊರುವ ಹಿಂಸೆಯೇಕೆಂದು
ಹೊರಟುಬಿಟ್ಟಳು ಜಾನಕಿ;
ಭೂಮಿ ಬಾಯ್ತೆರೆಯಿತು,
ಕರುಣಾಳು ರಾಘವ ಹಗುರಾದ'

ಹೀಗೆ 'ಗೌರೀದುಃಖ'ದ ಪ್ರತಿಯೊಂದು ಕವನವೂ ಮೊದಲ ಸಾಲಿನಿಂದಲೇ ನಮ್ಮೊಂದಿಗೆ ಮಾತಿಗೆ ಶುರುವಿಟ್ಟುಕೊಳ್ಳುತ್ತದೆ. ಅಮ್ಮನ ಮುಖದ ಮುದುರುಗಳೊಳಗೆ ಕಳೆದುಹೋದ ಗುಳಿಕೆನ್ನೆ ಮತ್ತೆ ಗೋಚರಿಸತೊಡಗುತ್ತದೆ. ಅಡುಗೆ ಮನೆಯ ಹೊಗೆಯ ನಡುವೆ ಕರಗಿದ ಕನಸಿನ ಘಮವೊಂದು ಮೂಗಿಗೆ ಬಡಿಯತೊಡಗುತ್ತದೆ. ಇದುವರೆಗೆ 'ಶೃಂಗಾರಕ್ಕೆ ಬಳಿದುಕೊಂಡಿದ್ದು' ಎಂದೇ ಭಾವಿಸಿದ್ದ ಅವಳ ಕಣ್ಣ ಕಾಡಿಗೆಯ ಹಿಂದಿನ ನಿಜವಾದ ಅರ್ಥದ ಪರಿಚಯವಾಗುತ್ತದೆ. ಪುಟಾಣಿ ಮಗಳ ಕೈ ಹಿಡಿದು ಹೊರಟ ಅಮ್ಮನ ಪ್ರೀತಿ, ಕಾಳಜಿ, ಆತಂಕ, ನೆನಪುಗಳೆಲ್ಲ ಮಗಳ ಪುಟ್ಟಪುಟ್ಟ ಹೆಜ್ಜೆಗಳಂತೆಯೇ ಕಣ್ಣೆದುರು ಮೂಡತೊಡಗುತ್ತವೆ. ಅಮ್ಮನಾಗಿ, ಅಕ್ಕನಾಗಿ, ಮಡದಿಯಾಗಿ, ಗೆಳತಿಯಾಗಿ ನಮ್ಮ ಜೊತೆಯಲ್ಲೇ ಇರುವ ಹೆಣ್ಣಿನ, ನಾವು ಕಾಣದ ಹೂ ಚಹರೆಗಳು ಕವನ-ಕವನವಾಗಿ ಅರಳುತ್ತವೆ, ಮುದುಡುತ್ತವೆ.

ಒಮ್ಮೆ ಓದಿ...

ಕೃತಿ: ಗೌರೀದುಃಖ
ಲೇಖಕಿ: ವಿದ್ಯಾರಶ್ಮಿ ಪೆಲತಡ್ಕ
ಪ್ರಕಾರ: ಕವನ ಸಂಕಲನ

ಪ್ರಕಾಶಕರು: ಅಭಿನವ,
17/18-2, ಮೊದಲನೇ ಮುಖ್ಯರಸ್ತೆ,
ಮಾರೇನಹಳ್ಳಿ, ವಿಜಯನಗರ,
ಬೆಂಗಳೂರು 40.
ಫೋನ್: 9448804905
080-23505825

No comments:

Post a Comment