Sunday 21 January 2018

ಸೀರಿಯಲ್ ಕಿಲ್ಲರ್ಸ್ (ಕೆ. ಗಣೇಶ ಕೋಡೂರು)



ಮನುಷ್ಯನ ಮನಸ್ಸೆನ್ನುವುದು ಒಂದಕ್ಕೊಂದು ಬೆಸೆದುಕೊಂಡ ಲಕ್ಷಾಂತರ ಅಗೋಚರ ಎಳೆಗಳ ಹಂದರ. ಯಾವ ದಂಟು ಯಾವ ಕೆಸರನ್ನು ಹೀರಿ ಅದ್ಯಾವ ಹೂ ಬಿಡುತ್ತದೋ ಹೇಳಲಾಗದು. ಬಿಟ್ಟ ಹೂವೆಲ್ಲ ಪಾರಿಜಾತಗಳೇ ಆಗಬೇಕೆಂದೇನಿಲ್ಲ, ಪ್ರಾಣ ತೆಗೆಯುವ 'ಅಜೇಲಿಯಾ' ಕೂಡಾ ಆಗಿರಬಹುದು. ಹೀಗೇ, ಮನವೆಂಬ ನಿಗೂಢ, ಅಗೋಚರ ಹಂದರದಲ್ಲಿ ಗುಪ್ತವಾಗಿ ನೂರಾರು ಅಜೇಲಿಯಾದಂತಹಾ ವಿಷಕಾರಿ ಹೂಗಳನ್ನು ಬೆಳೆಸಿಕೊಂಡ ವಿಕೃತ ವ್ಯಕ್ತಿಗಳ ಸರಣಿ ಕಥಾನಕವೇ ಲೇಖಕ ಕೆ. ಗಣೇಶ ಕೋಡೂರು ಅವರು ಬರೆದಿರುವ 'ಸೀರಿಯಲ್ ಕಿಲ್ಲರ್ಸ್'.

ಆಂಗ್ಲ ಸಾಹಿತ್ಯದಲ್ಲಿ ಮಾನಸಿಕವಾಗಿ ಪ್ರಕ್ಷುಬ್ಧವಾದವರ ಬಗೆಗಿನ ಕೃತಿಗಳು ಬೆಕಾದಷ್ಟು ಬಂದಿವೆಯಾದರೂ ನಮ್ಮ ನಡುವೆ ಕೇವಲ ಶೀರ್ಷಿಕೆಯಷ್ಟನ್ನೇ ಓದಿಕೊಂಡು, ತೀರಾ ಮಡಿವಂತಿಕೆಯಿಂದ 'ಇಂತಹ ಪುಸ್ತಕಗಳು ಬೇಕಾ?' ಎಂದು ಕೇಳುವ ವಾದಗಳು ಹಲವಿವೆ. ಆದರೆ ಕ್ರೌರ್ಯವನ್ನಾಗಲೀ ಅದನ್ನೆಸಗಿದ ವ್ಯಕ್ತಿಯ ಕ್ರಿಯೆಗಳನ್ನಾಗಲೀ ವಿಜ್ರಂಭಿಸದೇ ತೆಳುವಾದ ಮನೋವಿಜ್ಞಾನದ ಹಿನ್ನೆಲೆಯಲ್ಲಿ ಬರೆದ 'ಸೀರಿಯಲ್ ಕಿಲ್ಲರ್ಸ್' ನಂತಹ ಪುಸ್ತಕಗಳು ನಿಜಕ್ಕೂ ಬೇಕು. ಏಕೆಂದರೆ ಈ ಪುಸ್ತಕದಲ್ಲಿನ ಪಾತ್ರಗಳು ದೂರದ ಮಂಗಳ ಗ್ರಹದವರೇನೂ ಅಲ್ಲ; ಬದಲಿಗೆ ನಮ್ಮ ಇದೇ ಭೂಮಂಡಲದ ನಾಗರಿಕ ಸಮಾಜದಲ್ಲಿ ನಮ್ಮಷ್ಟೇ ಸುಶಿಕ್ಷಿತರಾಗಿ ಬೆಳೆದವರು! ಇನ್ನೊಂದರ್ಥದಲ್ಲಿ ಇವು ಕೊಲೆಗಾರರ ಕಥೆಗಳೇ ಹೊರತು ಕೊಲೆಗಳ ಕಥೆಯಲ್ಲ. ಹೇಗೆ ನಮ್ಮ ಚಿಕ್ಕಪುಟ್ಟ ವಿಕೃತಿಗಳೂ ನಮ್ಮ ಕುಟುಂಬದಲ್ಲಿನ ಎಳೆಯರ ಮನಸ್ಸನ್ನು ಸುಪ್ತವಾಗಿ ವಿರೂಪಗೊಳಿಸಬಲ್ಲವೆಂಬುದಕ್ಕೆ ಇಲ್ಲಿ ಸಾಕಷ್ಟು ಜೀವಂತ ಉದಾಹರಣೆಗಳ ಕಥಾನಕಗಳಿವೆ. "ಈ ಜಗತ್ತಿನಲ್ಲಿ ಇಂತಹ ಇನ್ನಷ್ಟು ಹಂತಕ ಮನಸ್ಸುಗಳು ಹುಟ್ಟದಂತೆ ಎಚ್ಚರಿಕೆಯಿಂದ ನೋಡಿಕೊಂಡ ವಿಜ್ಞಾನಿಗಳಿಗೆ ಅರ್ಪಣೆ" ಎನ್ನುವ ಚಿಕ್ಕ ಸಾಲೇ ಇಡೀ ಪುಸ್ತಕದ ಆಶಯ ಹಾಗೂ ಒಳತಿರುಳನ್ನು ಹೇಳಿಬಿಡುತ್ತದೆ. ಕುಡಿದು ಅತ್ಯಾಚಾರವೆಸಗುತ್ತಿದ್ದ ಅಪ್ಪ, ಕಾಳಜಿ ಕಳಕೊಂಡಿದ್ದ ಅಮ್ಮ, ಚಿಕ್ಕಂದಿನಲ್ಲೆಂದೋ ತಲೆಗಾಗಿದ್ದ ಏಟು, ವ್ಯಕ್ತಿಯೊಬ್ಬರ ಮೇಲಿನ ಅತಿಯಾದ ಪ್ರೀತಿ.. ಹೀಗೆ ಮನಸ್ಸೊಂದನ್ನು ವಿಕೃತಿಗೆ ತಿರುಗಿಸಿದ ಹಲವಾರು ಕಾರಣಗಳು ಇಲ್ಲಿವೆ. ನಾವು-ನೀವೆಲ್ಲ ಬೆಚ್ಚಗೆ ಹೊದ್ದು ಮಲಗುವ ಅದೇ ಕತ್ತಲಿನ ಇನ್ನೊಂದು ಅಂಚಿನಲ್ಲೆಲ್ಲೋ ಸದ್ದಿಲ್ಲದೆ ಜರುಗಿಹೋಗುವ ಇಂತಹಾ ದುರಂತ ಘಟನಾವಳಿಗಳನ್ನು ಅನವಶ್ಯಕ ವಿಜ್ರಂಭಣೆ, ಅಲಂಕಾರಗಳಿಲ್ಲದೆ, ಆದರೆ ಅಷ್ಟೇ ಕುತೂಹಲಕಾರಿಯಾಗಿ ಲೇಖಕರು ವರ್ಣಿಸಿದ್ದಾರೆ.

ಸಂಜೆಯ ಚಹಾದ ಹೊತ್ತಿಗೆ ಓದಲು ಪ್ರಾರಂಭಿಸಿದರೆ ರಾತ್ರೆಯ ಊಟದ ಹೊತ್ತಿಗೆಲ್ಲ ಮುಗಿದುಹೋಗುವ ಅಚ್ಚುಕಟ್ಟಾದ ಪುಟ್ಟ ಪುಸ್ತಕವಿದು.

ಒಮ್ಮೆ ಓದಿ..

ಕೃತಿ: ಸೀರಿಯಲ್ ಕಿಲ್ಲರ್ಸ್.
ಅಡಿಬರಹ: ಜಗತ್ತು ಕಂಡ ಕುಖ್ಯಾತ ಸರಣಿ ಹಂತಕರ ಬದುಕಿನ ಕಥೆಗಳು.
ಲೇಖಕರು: ಕೆ. ಗಣೇಶ ಕೋಡೂರು.
ಪ್ರಕಾರ: ಸರಣಿ ಲೇಖನಗಳು.
ಪ್ರಕಾಶಕರು: ಬೆನಕ ಬುಕ್ಸ್ ಬ್ಯಾಂಕ್,
ಯಳಗಲ್ಲು, ಕೋಡೂರು,
ಹೊಸನಗರ- 577445,
ಶಿವಮೊಗ್ಗ.
ಫೋನ್: 08185 - 267050.
8861065161.
ಬೆಲೆ: ರೂ.70/-

No comments:

Post a Comment