Sunday 21 January 2018

ಮಹಾಪಲಾಯನ (ಪೂರ್ಣಚಂದ್ರ ತೇಜಸ್ವಿ)



ಪರಿಸರ, ವಿಜ್ಞಾನ ವಿಷಯಗಳನ್ನ ಸರಳ ಭಾಷೆಯಲ್ಲಿ  ವಿವರಿಸುವ ಕೆ.ಪಿ.ಪೂರ್ಣ ಚಂದ್ರ ತೇಜಸ್ವಿಯವರು ಹತ್ತು ಹಲವಾರು ಕಥೆ, ಕಾದಂಬರಿಗಳನ್ನು ರಚಿಸಿ ಓದುಗ ಬಳಗಕ್ಕೆ ಹೊಸತನವನ್ನ ಉಣಬಡಿಸಿದ್ದಾರೆ. ಪ್ರವಾಸ, ಚಾರಣ, ಛಾಯಾಗ್ರಹಣ ಇವರ ಪ್ರಮುಖ ಹವ್ಯಾಸಗಳು. 'ಮಹಾ ಪಲಾಯನ'ವು ಪುಚಂತೇ ಯವರ ಮಿಲೇನಿಯಂ ಸೀರೀಸ್ ನ ೧೪ನೇಯ ಪುಸ್ತಕ. ಪೋಲಿಷ್ ಮತ್ತು ಫ್ರೆಂಚ್ ಕೃತಿಗಳಿಂದ ಪ್ರಭಾವಿತರಾದ ಲೇಖಕರ ಆಲೋಚನೆಗಳೇ 'ಮಹಾಪಲಾಯನ' ಎಂಬ ರೋಚಕ ಹುಟ್ಟಿಗೆ ಕಾರಣವಾಯಿತು.
ಪೂಚಂತೇಯವರ ಮಾತುಗಳಲ್ಲೇ ಈ ಕೃತಿಯ ಬಗ್ಗೆ ವಿವರಣೆ ಕೊಟ್ಟರೆ ಬಹುಶಃ ಕೃತಿಗೆ ನ್ಯಾಯ ಒದಗಿಸಿದಂತೆ ಎಂಬ ಭಾವನೆ. ಮುನ್ನುಡಿಯಿಂದಲೇ ಆಯ್ದ ಅವರ ಮಾತುಗಳು --

''ಈ ಕೃತಿಯ ಬಗ್ಗೆ ನಾನು ಹೆಚ್ಚಿಗೆ ಹೇಳುವುದು ಏನೂ ಇಲ್ಲ‌ . ನನ್ನ ಜೀವನದಲ್ಲಿ ನನ್ನನ್ನು ಅತ್ಯಂತ ಆಳವಾಗಿ ಕಲಕಿದ , ಬಹುದಿನಗಳವರೆಗೆ ಕಾಡಿದ ಮಹಾ ಪಲಾಯನದ ಎರಡು ಕೃತಿಗಳೆಂದರೆ ಪೋಲಿಷ್ ಲೇಖಕ ಸ್ಲಾವೋಮಿರ್ ರಾವಿಸ್ ಬರೆದ 'ದಿ ಲಾಂಗ್ ವಾಕ್' ಮತ್ತು ಫ್ರೆಂಚ್ ಲೇಖಕ ಹೆನ್ರಿ ಛಾರೇರೆ ಬರೆದ 'ಪ್ಯಾಪಿಲಾನ್' ಕೃತಿಗಳು. ಸಂಕೋಲೆಯಿಂದ ವಿಮುಕ್ತವಾಗಲು , ಬಂಧನದಿಂದ ಪಾರಾಗಲು ಮನುಷ್ಯ ಪ್ರಯತ್ನದ ಅಸಾಧ್ಯ ಸಾಧ್ಯತೆಗಳಿಗೆ ಇವರಿಬ್ಬರ ಅನುಭವಗಳು ಜ್ವಲಂತ ಉದಾಹರಣೆಗಳು. ಛಾರೇರೆಯ ಪುಸ್ತಕ ಬಹು ದೊಡ್ಡ ದಾದ್ದರಿಂದ ರಾವಿಸ್ ಅನುಭವಗಳ ಸಂಗ್ರಹ ಮಾತ್ರ ಇಲ್ಲಿ ಕೊಟ್ಟಿದ್ದೇನೆ. ಈ ಶತಮಾನ ನಾಗರಿಕತೆಯ ಹೆಸರಿನಲ್ಲಿ , ನ್ಯಾಯದ ಹೆಸರಿನಲ್ಲಿ , ಸಮಾನತೆಯ ಹೆಸರಿನಲ್ಲಿ , ಸಿಧ್ಧಾಂತಗಳ ಹೆಸರಿನಲ್ಲಿ ಯಾವ ಶಿಲಾಯುಗ ಮನುಷ್ಯನೂ ಮಾಡಿಲ್ಲದ ಹೇಯ ಕೃತ್ಯಗಳನ್ನು ಎಸಗಿರುವುದು ಈ ಶತಮಾನಕ್ಕೆ ವಿಷಾದದಿಂದ ವಿದಾಯ ಹೇಳುವಂತೆ ಪ್ರೇರೇಪಿಸುತ್ತದೆ. ಮಾರ್ಕ್ಸವಾದದ ಆದರ್ಶದಲ್ಲಿ , ಇಡೀ ವಿಶ್ವವನ್ನೇ ಕಮ್ಯುನಿಸ್ಟ್ ಆಡಳಿತಕ್ಕೆ ಒಳಪಡಿಸುವ ಹುಚ್ಚಿನಲ್ಲಿ ಆ ದೇಶಗಳಲ್ಲಿ ನಡೆಯುತ್ತಿದ್ದ ಅಮಾನುಷ ಕೃತ್ಯಗಳತ್ತ ಮೊದಲ ಬಾರಿ ಜಗತ್ತಿನ ಗಮನ ಸೆಳೆದ ಪುಸ್ತಕ ಸ್ಲಾವೋಮಿರ್ ರಾವಿಸ್ ನ ಕೃತಿ ' ಮಹಾ ಪಲಾಯನ'. ಈ ಶತಮಾನ ಕಳೆಯುವುದರೊಳಗೆ ಆ ದೇಶಗಳೆಲ್ಲಾ ತಮ್ಮ ಭ್ರಾಂತಿಯಿಂದ ಎಚ್ಚೆತ್ತುಕೊಂಡವು ಎನ್ನುವುದು ಸಮಾಧಾನದ ಸಂಗತಿಯಾದರೂ, ಸಮಾನತೆಯ ದಿವ್ಯಾದರ್ಶನ ಜಪಿಸುತ್ತಲೇ ಎಂಥ ನಿರರ್ಥಕ ಕ್ರೌರ್ಯದ ಆರಾಧನೆಯಲ್ಲಿ , ಎಷ್ಟು ಮುಗ್ಧ ಹೃದಯಗಳ ಬದುಕನ್ನು ಹೊಸಕಿದರು ಎನ್ನುವುದು ನಮ್ಮನ್ನು ಖಿನ್ನಗೊಳಿಸುತ್ತದೆ. ಉನ್ನತ ನಾಗರಿಕ ಸಮಾಜದ ಕ್ರೌರ್ಯದಿಂದ ಪಲಾಯನ ಮಾಡಿದ ಸ್ಲಾವೋಮಿರ್ ಅನಾಗರಿಕ ಅಸಂಸ್ಕೃತ ಅಲೆಮಾರಿಗಳಲ್ಲಿ ಕಂಡ ಔದಾರ್ಯ , ಮಾನವೀಯತೆ, ಹೃದಯವಂತಿಕೆಗಳಿಂದ ಮತ್ತೆ ಮನುಷ್ಯತ್ವದ ಬಗ್ಗೆ ಭರವಸೆ ಮೂಡುತ್ತದೆ.
ಈ ಶತಮಾನದ ಬಹುಪಾಲನ್ನು ಕಾಡಿದ ರಾಜಕೀಯ ಮೂಲಭೂತವಾದದ ಯುಗವೇನೋ ಕೊನೆಯಾಗುತ್ತಿದೆ, ಆದರೆ ಅದರ ಜಾಗವನ್ನು ಧಾರ್ಮಿಕ ಮೂಲಭೂತವಾದ ಆಕ್ರಮಿಸುವ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿವೆ. ಮತ್ತೊಮ್ಮೆ ಮಾನವೀಯತೆಯ ಮೇಲೆ ಕ್ರೌರ್ಯ, ದಬ್ಬಾಳಿಕೆ, ದಮನಗಳನ್ನು ಇದು ಹೇರಿ ಇಪ್ಪತ್ತೊಂದನೆ ಶತಮಾನವನ್ನೂ ರಕ್ತಸಿಕ್ತಗೊಳಿಸುವ ಮೊದಲು ಎಚ್ಚರಿಸುವುದು ಈ ಕೃತಿಯ ಪರೋಕ್ಷ ಉದ್ದೇಶಗಳಲ್ಲಿ ಒಂದು.''

(ಮಾಹಿತಿ ಸಂಗ್ರಹ & ನಿರೂಪಣೆ: ಪ್ರಜ್ಞ ಜಿ.ಕೆ.)

ಲೇಖಕರು: ಕೆ. ಪಿ. ಪೂರ್ಣ ಚಂದ್ರ ತೇಜಸ್ವಿ

ಪ್ರಕಾಶಕರು:ಪುಸ್ತಕ ಪ್ರಕಾಶನ
91, 9ನೇ ಮುಖ್ಯ ರಸ್ತೆ
ಸರಸ್ವತಿ ಪುರಂ,
ಮೈಸೂರು-570009

ಪುಟಗಳು: 95

No comments:

Post a Comment