Friday 19 May 2017

ಅಮ್ಮ ಹೇಳಿದ ಎಂಟು ಸುಳ್ಳುಗಳು (ಎ.ಆರ್. ಮಣಿಕಾಂತ್)


Amma helida entu sullugalu (A.R. Manikanth)
ಇಲ್ಲಿನ ಲೇಖನಗಳು ಉಂಟುಮಾಡಿದ ಪರಿಣಾಮಗಳ ಬಗ್ಗೆ ನಾಲ್ಕುಮಾತು ಹೇಳಲೇಬೇಕು. ಜಾಕ್ವೆಲಿನ್ ಳ ಹೋರಾಟದ ಬದುಕಿನ ಕಥೆ ಓದಿದ ಮೆಜಸ್ಟಿಕ್ಕಿನ ಹುಡುಗನೊಬ್ಬ ಆತ್ಮಹತ್ಯೆ ಯೋಚನೆಯನ್ನು ಕೈಬಿಟ್ಟ. 'ಮಕ್ಕಳಿಗೆ, ಕೆನ್ನೆಗೆ ಹೊಡೀಬೇಡಿ' ಎಂದು ಬರೆದಿದ್ದಕ್ಕೆ ಪ್ರತಿಕ್ರಿಯಿಸಿದ ನೂರಾರು ಅಪ್ಪಂದಿರು 'ನಮ್ಮ ಕಣ್ತೆರಿಸಿದಿರಿ' ಎಂಬ ದೊಡ್ಡ ಮಾತುಗಳಾಡಿದರು. ಸುಭಾಷಿಣಿಯ ಕಥೆ ಓದಿದ ಹುಬ್ಬಳ್ಳಿಯ ಹೆಣ್ಣುಮಗಳೊಬ್ಬಳು ಅಲ್ಪ-ಸ್ವಲ್ಪ ಬದಲಾವಣೆ ಮಾಡಿದರೆ 'ಇದು ಪೂರ್ತಿ ನಂದೇ ಕಥೆ' ಅಂದಳು. 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಓದಿದ ರಾಯಚೂರಿನ ಮಲ್ಲಿನಾಥರೆಡ್ಡಿ, ಅವತ್ತೇ ವಿಜಯಕರ್ನಾಟಕ ಕಛೇರಿಗೆ ಬಂದು 'ನನ್ನ ಅಮ್ಮನನ್ನು ಸಾಗುವ ತನಕ ಚೆನ್ನಾಗಿ ನೋಡ್ಕೋತೀನಿ' ಎಂದು ಸಂಪಾದಕರಾದ ವಿಶ್ವೇಶ್ವರ ಭಟ್ ಅವರಿಗೆ ಭಾಷೆ ಕೊಟ್ಟು ಹೋದ. ನೆಲಮಂಗಲದ ಗೀತಾ, ತುಮಕೂರಿನ ರಾಜು, ಬೆಳಗಾವಿಯ ರಮೇಶ ಪಾಟೀಲ, ವಿಪ್ರೋದ ವೆಂಕಟರಾಮ್.... ಹೀಗೆ ನೂರಾರು ಜನ 'ಇದು ನಮ್ಮೆಲ್ಲರ ಮನೆಯ ಕಥೆ ಸರ್' ಎಂದು ಉದ್ಗರಿಸಿದರು. ಮಾತಿಗೊಮ್ಮೆ ಬಿಕ್ಕಳಿಸಿದರು. ಇಷ್ಟು ಸಾಲದೆಂಬಂತೆ ವರ್ಷದ ಮುನ್ನೂರ ಅರವತೈದು ದಿನವೂ ನಗುತ್ತಲೇ ಇರುವ ಕವಿಮಿತ್ರ ಚಿದಾನಂದ ಸಾಲಿ ಕೂಡ 'ನಿನ್ನ ಕಥೆ ಓದೀನಿ. ದುಃಖ ತಡೀಕ್ಕಾಗ್ದು ನೋಡೋಣ. ಓದೋರ್ನೆಲ್ಲ ಅಳಿಸ್ಬೇಕಂತ ಬಾಜಿಬಕಟ್ಟಿಯೇನು?' ಎಂದ!

(ಎ.ಆರ್. ಮಣಿಕಾಂತ್ ಅವರು ಬರೆದ ಬೆನ್ನುಡಿಯಿಂದ ಆಯ್ದದ್ದು)

*ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಲಲಿತ ಪ್ರಬಂಧ ವಿಭಾಗದಲ್ಲಿ 2009ನೇ ಸಾಲಿನ ವರ್ಷದ ಶ್ರೇಷ್ಠ ಪುಸ್ತಕ ಪ್ರಶಸ್ತಿ ಪಡೆದ ಕೃತಿ.

*80 ತಿಂಗಳಲ್ಲಿ 90,000 ಪ್ರತಿಗಳ ದಾಖಲೆ ಮಾರಾಟಕಂಡ ಕೃತಿ.

*ಅರವತ್ತು ತಿಂಗಳ ಅವಧಿಯಲ್ಲಿ ಎಪ್ಪತೈದು ಮುದ್ರಣ ಕಂಡ ಕೃತಿ.

ಹೇಳುತ್ತಾ ಹೋದರೆ ಇಂತಹಾ ಇನ್ನೂ ನೂರು ಹೆಗ್ಗಳಿಕೆಗಳಿರುವ ಕೃತಿ 'ಅಮ್ಮ ಹೇಳಿದ ಎಂಟುಸುಳ್ಳು'. ಕನ್ನಡ ಪುಸ್ತಕಗಳನ್ನು ಕೊಳ್ಳುವರಿಲ್ಲ ಎನ್ನುವ ಸುಳ್ಳುನಂಬಿಕೆಗೆ ಸಾಕ್ಷಿಸಹಿತ ಉತ್ತರ ಈ ಪುಸ್ತಕ. 

ಒಮ್ಮೆ ಓದಿ... 

ಕೃತಿ: ಅಮ್ಮ ಹೇಳಿದ ಎಂಟು ಸುಳ್ಳುಗಳು.
ಲೇಖಕರು: ಎ.ಆರ್. ಮಣಿಕಾಂತ್
ಪ್ರಕಾರ: ವ್ಯಕ್ತಿತ್ವ ವಿಕಾಸ (ಲೇಖನಗಳ ಸಂಗ್ರಹ)
ಪ್ರಕಾಶಕರು: ನೀಲಿಮಾ ಪ್ರಕಾಶನ,
ನಂ.689, 5ನೇ ಮುಖ್ಯರಸ್ತೆ,
8ನೇ ಅಡ್ಡರಸ್ತೆ, ಕೆಂಗೇರಿ ಉಪನಗರ, 
ಬೆಂಗಳೂರು 560060.
ಫೋನ್: 9901307249/9900818744.
ಬೆಲೆ ರೂ. 120/-

No comments:

Post a Comment