Sunday 12 February 2017

ಮೇಜರ್ ಸಂದೀಪ್ ಹತ್ಯೆ (ರವಿ ಬೆಳಗೆರೆ)


Major Sandeep hatye (Ravi Belagere)

ಅದು ನವೆಂಬರ್ 26, 2008; ರಾತ್ರೆ ಸುಮಾರು 9:45 ರ ಸಮಯ. ಭಾರತವೆಂಬ ನೂರಿಪ್ಪತ್ತೂ ಚಿಲ್ಲರೆ ಕೋಟಿ ಜನಸಂಖ್ಯೆಯ ದೇಶ ಇನ್ನೇನು ನಿದ್ರೆಗೆ ಜಾರುವುದರಲ್ಲಿತ್ತು. ಆದರೆ ಇದ್ದಕ್ಕಿದ್ದಂತೆ ಟಿವಿ ಪರದೆಯ ಮೇಲೆ ದೃಶ್ಯದೃಶ್ಯಗಳಾಗಿ ಮೂಡಿಬಂದ ಕೋಲಾಹಲ ಅವರನ್ನು ಬೆಚ್ಚಿಬೀಳಿಸಿತು. ಇದುವರೆಗೆ ಕಂಡುಕೇಳದ ಭಯಾನಕ, ಆಘಾತಕರ ಸುದ್ದಿಯದು.

"ಕೆಲ ಶಸ್ತ್ರಧಾರೀ ಭಯೋತ್ಪಾದಕರು ಮುಂಬೈನ ವಿವಿಧ ಕಡೆ ಗುಂಡಿನ ಮಳೆಗೈದು ನಾಗರಿಕರನ್ನು ಮನಬಂದಂತೆ ಕೊಲ್ಲುತ್ತಿದ್ದಾರೆ!"

ಇಂಡಿಯಾಗೇಟ್ ನ ಎದುರೇ ಇರುವ ಹೋಟೆಲ್ ತಾಜ್, ಛತ್ರಪತಿ ಶಿವಾಜಿ ರೈಲ್ವೇ ನಿಲ್ದಾಣ, ಕಾಮಾ ಹಾಸ್ಪಟಲ್,  ಲಿಯೋಪೋಡ್ ಕೆಫೆ,  ನಾರಿಮನ್ ಹೌಸ್, ಟ್ರಿಡಂಟ್ ಹೌಸ್... ಹೀಗೆ ಜನಭರಿತವಾಗಿದ್ದ ಪ್ರದೇಶಗಳಲ್ಲೆಲ್ಲಿ ಇದ್ದಕ್ಜಿದ್ದಂತೆ ಪ್ರತ್ಯಕ್ಷರಾದ ಉಗ್ರರು ಮನಬಂದಂತೆ ಗುಂಡುಹಾರಿಸುತ್ತಾ ನರಮೇಧ ಆರಂಭಿಸಿದ್ದರು. ಶಾಂತಿಯುತ ರಾತ್ರೆಯೊಂದನ್ನು ಎದುರು ನೋಡುತ್ತಿದ್ದ ಮುಂಬೈ ಜನತೆಯ ಪಾಲಿಗೆ ಮುಂದಿನ ಮೂರು ದಿನಗಳವರೆಗೆ ರಾತ್ರೆಯೆಂಬುದು ಬರಲೇ ಇಲ್ಲ! ಭಾರತವೆಂಬ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರದ ಘನತೆಯನ್ನು ಹತ್ತುಜನ ನರಿಗಳಂತಹಾ ಕ್ಷುದ್ರ ಭಯೋತ್ಪಾದಕರು ಅಲ್ಲಾಡಿಸಿದ್ದರು!

ಸ್ವಪ್ನದಲ್ಲೂ ಊಹಿಸಲಾಗದ ಈ ಭಯಾನಕ ಘಟನೆ ನಮ್ಮ-ನಿಮ್ಮನ್ನೆಲ್ಲಾ ಕೇವಲ ಸುದ್ದಿಯಾಗಿ ಬಂದು ತಲುಪಿತ್ತು. ಆದರೆ ದಯೆಯೆಂಬ ಅತೀ ಸಣ್ಣ ಶಬ್ದದ ಅರ್ಥವನ್ನು ಮರೆತ ಹತ್ತುಮಂದಿ ನರರಾಕ್ಷಸರು ಸೃಷ್ಟಿಸಿದ ಉತ್ಪಾತದಿಂದ ಪ್ರಾಣ ಉಳಿಸಿಕೊಳ್ಳಲು ತಮ್ಮತಮ್ಮ ಉಸಿರನ್ನೇ ನುಂಗಿಕೊಂಡು ಬದುಕಿದವರ ಹಾಗೂ ಉಸಿರೆಳೆದುಕೊಳ್ಳುವ ಮೊದಲೇ ಬಲಿಯಾಗಿ ಹೋದವರ ನೆತ್ತರಗಾಥೆಯೇ ರವಿಬೆಳಗೆರೆಯವರ "ಮೇಜರ್ ಸಂದೀಪ್ ಹತ್ಯೆ"

ಅಡಿಬರಹವೇ ಹೇಳುವಂತೆ ಮುಂಬೈ ಧಾಳಿಯ ಕ್ಷಣ-ಕ್ಷಣದ ವಿವರವೂ ಇದರಲ್ಲಿದೆ. ಕರಾಚಿಯಿಂದ ಹಡಗಿನಲ್ಲಿ ಹೊರಟ ಭಯೋತ್ಪಾದಕರು ಪಾಕಿಸ್ತಾನದ ಜಲಗಡಿಯನ್ನು ದಾಟಿಹೋದ 'ಕುಬೇರ್' ಎನ್ನುವ ದುರದೃಷ್ಟಕರ ಮೀನುಗಾರ ದೋಣಿಯನ್ನು ವಶಪಡಿಸಿಕೊಂಡು ಮುಂಬೈ ತಲುಪುತ್ತಾರೆ. 8:30ಕ್ಕೆ ಮುಂಬೈತೀರ ತಲುಪಿ ಐದು ಗುಂಪುಗಳಾಗಿ ಪೂರ್ವನಿಯೋಜಿತ ಗಮ್ಯಗಳತ್ತ ಚದುರುತ್ತಾರೆ. ಒಂದು ಗಂಟೆಯ ನಂತರ ತಮ್ಮತಮ್ಮ 'ಗುರಿ' ತಲುಪಿ ಮಾರಣ ಹೋಮ ಆರಂಭಿಸುತ್ತಾರೆ! ಮುಂದೆ ಈ ಪೈಕಿ ಕಟ್ಟಕಡೆಯ ಭಯೋತ್ಪಾದಕನೂ ಸತ್ತಸುದ್ದಿ (ಕಸಬ್ ನನ್ನು ಹೊರತುಪಡಿಸಿ) ತಲುಪುವ ಹೊತ್ತಿಗೆ ಕ್ಯಾಲೆಂಡರ್ ಎರೆಡೂವರೆ ದಿನ ಮುಂದಕ್ಕೆ ಹೋಗಿತ್ತು. ಅಷ್ಟರಲ್ಲಾಗಲೇ 168 ಅಮಾಯಕ ಜೀವಗಳು ನಮ್ಮನ್ನಗಲಿಹೋಗಿದ್ದವು.

ಎಷ್ಟೆಲ್ಲಾ ಭದ್ರತೆಗಳಿದ್ದೂ ಹತ್ತು ಬಂದೂಕುಧಾರೀ ಭಯೋತ್ಪಾದಕರು ಸಿಡಿಮದ್ದುಗಳ ಸಮೇತ ಅಷ್ಟು ಸುಲಭವಾಗಿ ದೇಶದೊಳಕ್ಕೆ ನುಗ್ಗಿದ್ದಾದರೂ ಹೇಗೆ? ಇಂತಹಾ ಧಾಳಿಯೊಂದು ಕಡಲಮೂಲಕ ತೇಲಿಬರಬಹುದೆಂಬ ಸುಳಿವಿದ್ದೂ ಅದನ್ನು ತಡೆಯಲಾಗದೇ ಹೋಗಿದ್ದೇಕೆ? ಕರಾಚಿಯಿಂದ ಅನುಮಾನಾಸ್ಪದ ಹಡಗೊಂದು ಭಾರತದ ಜಲಗಡಿಯತ್ತ ತೇಲಿಬರುತ್ತಿರುವ ಅತಿಮುಖ್ಯ ಸುದ್ದಿ ವ್ಯರ್ಥವಾದದ್ದು ಹೇಗೆ? ತಾಜ್ ನ ಸಂದಿಗೊಂದಿಗಳಲ್ಲಿ ಅಡಗಿಕೊಂಡು, ನೆತ್ತಿಯ ಮೇಲೇ ಸಾವಾಗಿ ತಿರುಗಾಡುತ್ತಿರುವ ಭಯೋತ್ಪಾದಕರಿಂದ ನೂರಾರು ಅಥಿತಿಗಳು ತಪ್ಪಿಸಿಕೊಂಡದ್ದು ಹೇಗೆ? ಕ್ಷಣಕ್ಷಣಕ್ಕೂ ಅವರು ಎದುರಿಸಿದ ಭಯ ಎಂತಹದು? ಅವರಿಗೆ ನೆರವಾದವರು ಯಾರು? 

ಓದುತ್ತಾ ಹೋದಂತೆ ಭಯ ಸದ್ದಿಲ್ಲದೆ ಬೆನ್ನುಹುರಿಯೊಳಕ್ಕೆ ಪ್ರವೇಶಿಸಿಬಿಡುತ್ತದೆ. 

ಇದೆಲ್ಲಾ ಮುಗಿದ ಕಥೆ ನಿಜ; ಮುಂಬೈನ ಬೀದಿಗಳಲ್ಲಿ ಕರಣೆ ಕರಣೆಯಾಗಿ ಮಡುಗಟ್ಟಿದ ರಕ್ತದ ಸಣ್ಣ ಕಲೆಯೂ ತೊಳೆದುಹೋಗಿರುವುದೂ ನಿಜ. ಈ ದೇಶದಲ್ಲಾಗುವ ಸಕಲ ಅನಾಹುತಗಳಿಗೂ ಕಟ್ಟಕಡೆಯ ಹೊಣೆಗಾರನಾದ ಸರಕಾರವನ್ನು ದೂರಿ ಎಲ್ಲರೂ ನಿರಾಳರಾಗಿರುವುದೂ ನಿಜವೇ. ಆದರೆ ಇತಿಹಾಸವೆನ್ನುವ ನಾಳೆಯ ಪ್ರತಿಬಂಬವನ್ನು ಅರಿಯಲೋಸುಗವಾದರೂ ಮುಂಬೈ ಧಾಳಿಯನ್ನು ನಾವೆಲ್ಲಾ ಓದಲೇಬೇಕು. ಎಂದೋ ಯಾರೋ ಹಚ್ಚಿದ, ಎಲ್ಲೋ ಯಾರೋ ಎಣ್ಣೆಸುರಿದು ಉರಿಸುತ್ತಿರುವ ದ್ವೇಶವೆನ್ನುವ ಕಿಡಿಬೆಂಕಿ ಹೇಗೆ ಯಾವುದೋ ಮೂಲೆಯಿಂದ ಎದ್ದುಬಂದು ನೂರಾರು ಜೀವ-ಜೀವನಗಳನ್ನು ಸುಡುತ್ತದೆಂಬುದಕ್ಕೆ ದುರಂತಮಯ ನಿದರ್ಶನ- ಮುಂಬೈ ಧಾಳಿ. 

ಒಮ್ಮೆ ಓದಿ....

ಕೃತಿ: ಮೇಜರ್ ಸಂದೀಪ್ ಹತ್ಯೆ.
ಅಡಿಬರಹ: ಮುಂಬೈ ಮಾರಣಹೋಮದ ಕಥೆ.
ಲೇಖಕರು: ರವಿ ಬೆಳಗೆರೆ
ಪ್ರಕಾಶನ: ಭಾವನಾ ಪ್ರಕಾಶನ,
ಕದಿರೇನಹಳ್ಳಿ, ಪದ್ಮನಾಭನಗರ,
ಬೆಂಗಳೂರು 560070.
ದೂರವಾಣಿ: 080-26790804
ಲೇಖರ ಇನ್ನಿತರ ಕೃತಿಗಳು: ಹೇಳಿ ಹೋಗು ಕಾರಣ, ಬಾಟಮ್ ಐಟಮ್, ಲವ್ ಲವಿಕೆ, ಹಿಮಾಲಯನ್ ಬ್ಲಂಡರ್, ನೀ ಹಿಂಗ ನೋಡಬ್ಯಾಡ ನನ್ನ, ನೀನಾ ಪಾಕಿಸ್ತಾನ, ದಿ ಬ್ಲಾಕ್ ಫ್ರೈಡೇ.

No comments:

Post a Comment