Friday 17 February 2017

ಬೆಳದಿಂಗಳ ಬಾಲೆ (ಯಂಡಮೂರಿ ವೀರೇಂದ್ರನಾಥ್)




Beladingala basketball (Yandamoori Virendranath)

ನೀವು ಅನಂತ್ ನಾಗ್ ಅವರ ಬೆಳದಿಂಗಳ ಬಾಲೆ ಚಲನಚಿತ್ರ ನೋಡಿದ್ದೀರ?
ಹಾಗಾದರೆ ಈ ಕಾದಂಬರಿಯನ್ನೊಮ್ಮೆ ಓದಿ ನೋಡಿ.
ನೋಡುವ ಇರಾದೆಯಿದೆಯಾ?
ನೋಡುವ ಮೊದಲು ತಪ್ಪದೇ ಈ ಕಾದಂಬರಿಯನ್ನು ಓದಿ!

ಕಲ್ಪನಾವಿಲಾಸದ ವಿಷಯದಲ್ಲಿ ಬರಹಕಾವ್ಯವೆನ್ನುವುದು ದೃಶ್ಯಕಾವ್ಯಕ್ಕಿಂತ ಪರಿಣಾಮಕಾರಿಯಾದುದು. ದೃಶ್ಯಕಾವ್ಯವು ಕೇವಲ ತಾನು ತೋರಿಸಿದ್ದಕ್ಕಷ್ಟೇ ಸೀಮಿತವಾಗಿರುತ್ತದೆ. ಆದರೆ ಬರಹಕಾವ್ಯವು ಅನಿಯಮಿತ, ಅಮೂರ್ತ ಕಲ್ಪನೆಗಳ ವಿಸ್ತಾರದಲ್ಲಿ ಅರಳುತ್ತದೆ. ಭಾವನೆಗಳ ದಿಕ್ಕು ಬದಲಿಸುತ್ತದೆ. ಓದಿ ಮುಗಿಸಿದ ಮೇಲೆ ಕಥೆಯ ಮುಂದುವರಿಕೆಯನ್ನು ನಮ್ಮೊಳಗೆ ಬಿತ್ತುತ್ತದೆ...

ದೃಶ್ಯ ಹಾಗೂ ಬರಹ ಮಾಧ್ಯಮಗಳೆರೆಡರ ಅನುಭವ ಬೇರೆಬೇರೆಯಾದುದು ಎನ್ನುವುದಕ್ಕಾಗಿಯೇ ಇಷ್ಟೆಲ್ಲಾ ಪೀಠಿಕೆ. ಅಂದಹಾಗೆ ನಾನೀಗ ಹೇಳಹೊರಟಿರುವುದು ಯಂಡಮೂರಿ ವೀರೇಂದ್ರನಾಥ್ ಅವರ ಪ್ರಸಿದ್ಧ 'ಬೆಳದಿಂಗಳ ಬಾಲೆ' ಕಾದಂಬರಿಯ ಬಗ್ಗೆ. ಕನ್ನಡದ ಸುಂದರ ಪ್ರೇಮಕಾದಂಬರಿಗಳಲ್ಲಿ ಪ್ರಮುಖವಾದುದಿದು. ತೆಲುಗಿನ 'ವೆನ್ನೆಲಲೋ ಆಡಪಿಲ್ಲ' ವಂಶಿಯವರ ನವಿರಾದ ಅನುವಾದದಲ್ಲಿ ಸಿಲುಕಿ ಕನ್ನಡದಲ್ಲಿ 'ಬೆಳದಿಂಗಳ ಬಾಲೆ'ಯಾಗಿದೆ.

ಬೆಂಗಳೂರಿನ ಖಾಸಗೀ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ರೇವಂತ್ ಚೆಸ್ ಅನ್ನು ಬಾಲ್ಯದಿಂದಲೂ ಉಸಿರಾಡಿಕೊಂಡುಬಂದವನು. ಆ ಉತ್ಕಟತೆಯೇ ಅವನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತದೆ. ರಷ್ಯಾದ ಪೋಲನ್-ಸ್ಕೀ ಯನ್ನು ಸೋಲಿಸುವ ಮೂಲಕ ರೇವಂತ್ ಚಾಂಪಿಯನ್ ಆಗುತ್ತಾನೆ. ಸ್ಪರ್ಧೆ ಮುಗಿಸಿ ಮರಳಿದವನಿಗೆ ಅಪರಿಚಿತ ಹೆಣ್ಣೊಬ್ಬಳಿಂದ ಕರೆ ಬರುತ್ತದೆ.

ಅವಳೊಬ್ಬಳು ತುಂಟ ಹುಡುಗಿ. ತನ್ನ ಹೆಸರಿನಿಂದ ಹಿಡಿದು ತಾನಿರುವ ಜಾಗದ ತನಕ ಪ್ರತಿಯೊಂದನ್ನೂ 'ಕೋಡ್' ಹಾಗೂ ಲೆಕ್ಕಗಳ ಮೂಲಕ ಹೇಳುತ್ತಾಳೆ. ಕಣ್ಣಿಗೆ ಕಾಣದೇ, ಕೈಗೆ ಸಿಗದೇ ಕೇವಲ ತನ್ನ ಮುದ್ದು ಸ್ವರದ ಮೂಲಕ ಅವನ ಹೃದಯ ಪ್ರವೇಶಿಸಿ,'ಲೆಕ್ಕ ಬಿಡಿಸಿ ನೀನಾಗೇ ಕಂಡುಹಿಡಿ' ಎಂದು ರೇವಂತ್ ಗೆ ಸವಾಲೊಡ್ಡುತ್ತಾಳೆ. ತನ್ನ ಬುದ್ಧಿಮತ್ತೆಯನ್ನು ನಂಬಿರುವ ರೇವಂತ್ ಅವಳ ಪ್ರತಿಯೊಂದು ಸವಾಲನ್ನು ಬಿಡಿಸಲು ಏನೇನೋ ಸರ್ಕಸ್ ಮಾಡುತ್ತಾನೆ. ಇಂಟರ್ವ್ಯೂಗೆ ಬಂದವರಿಂದೆಲ್ಲಾ 'ರ' ಅಕ್ಷರದ ಹೆಸರುಗಳನ್ನು ಬರೆಸುತ್ತಾನೆ. ಮಧ್ಯರಾತ್ರಿ ನಡುರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಮೇಲೇರಿ, ಅವರ ಕೈ ತೋಳಿನಿಂದ ಎಷ್ಟು ಡಿಗ್ರಿ ಕೋನದಲ್ಲಿ ಚಾಚಿಕೊಂಡಿದೆಯೆಂದು ಅಳೆಯಲು ಹೋಗಿ ಪೋಲೀಸರ ಕೈಗೆ ಸಿಕ್ಕಿಬೀಳುತ್ತಾನೆ. ಭಯಾನಕ ಗಣಿತಜ್ಞ ಹುಚ್ಚೂರಾಯನ ಸಹಾಯ ಪಡೆಯುತ್ತಾನೆ. ಟಾನ್ ತೀಟಾ, ಕಾಸ್ ತೀಟಾ ಗಳ ಜೊತೆಗೆಲ್ಲಾ ಗುದ್ದಾಡುತ್ತಾನೆ. ತನ್ನ ಬೆಳದಿಂಗಳ ಬಾಲೆಯನ್ನರಸುತ್ತಾ ದಾರಿತಪ್ಪಿ ಹೋಟೆಲ್ ನಲ್ಲಿ ಹತ್ಯೆಯಾದ ಹೆಣ್ಣೊಬ್ಬಳ ಕೋಣೆಗೆ ನುಗ್ಗುವ ಅವನನ್ನು ಪೋಲೀಸರು ಒದ್ದು ಎಳೆದೊಯ್ಯುತ್ತಾರೆ. 

ಹೀಗೆ ನಾನಾ ಪಾಡು ಪಡುವ ನಿರ್ಮಲ ಪ್ರೇಮಿ ರೇವಂತ್ ನಿಗೆ ಅವಳು ತನ್ನನ್ನು ಕಂಡು ಹಿಡಿಯಲು ಅಂತಿಮ ದಿನಾಂಕದ ಗಡುವೊಂದನ್ನು ಕೊಟ್ಟಿರುತ್ತಾಳೆ. ಈ ನಡುವೆಯೇ ತನ್ನ ಮೇಲೆ ಬಂದ 'ವಶೀಕರಣ'ದ ಅಪವಾದದ ವಿರುದ್ಧ ತನ್ನನ್ನು ತಾನು ಸಾಬೀತು ಪಡಿಸಿಕೊಳ್ಳಲು ಅವನಾಡುವ ಬ್ಲೈಂಡ್ ಫೋಲ್ಡ್, ಅತಿ ಎನ್ನುವಷ್ಟು ಪ್ರಾಕ್ಟಿಕಲ್ ಆಗಿರುವ ಅವನ ಗೆಳೆಯ ಜೇಮ್ಸ್ ಬದಲಾಗುವ ಘಟನೆ, ತನ್ನ ಉದ್ಯೋಗಿಯೊಬ್ಬ ಗೆದ್ದಾಗ ಅವನ ಪ್ರಸಿದ್ಧಿಯನ್ನು ಬಳಸಿಕೊಂಡು, ಅವನು ಅಪಾವಾದಕ್ಕೀಡಾದಾಗ ಅವನನ್ನು 'ತೊಲಗು' ಎನ್ನುವ ಖಾಸಗೀ ಕಂಪನಿಗಳ ಸ್ವಾರ್ಥಸಾಧನೆ, ಟೆಲಿಫೋನ್ ಎಕ್ಸ್ ಚೇಂಜ್ ನವರ ತೊಳಲಾಟಗಳು.... ಹೀಗೇ ಕಥೆಯುದ್ದಕ್ಕೂ ಲೇಖಕರು ಜೀವನದ ಅನೇಕ ಸನ್ನಿವೇಶಗಳನ್ನು ಬಿಚ್ಚಿಟ್ಟಿದ್ದಾರೆ. ಕೊನೆಯಲ್ಲಿ ನಾಯಕಿ ಕೊಟ್ಟ ಗಡುವಿನಂದೇ ಪೋಲನ್ ಸ್ಕೀಯೊಂದಿಗಿನ ಸ್ಪರ್ಧೆಗಾಗಿ ರೇವಂತ್ ದೆಹಲಿಗೆ ಹೋಗಬೇಕಾಗುತ್ತದೆ. ಅವನು ಯಾವುದರಲ್ಲಿ ಗೆಲ್ಲುತ್ತಾನೆ, ಯಾವುದರಲ್ಲಿ ಸೋಲುತ್ತಾನೆ ಎನ್ನುವುದೇ ಕಥೆಯ ಮಹತ್ತರ ತಿರುವು.

ಪ್ರೇಮ ಕಾದಂಬರಿಯೊಂದರಲ್ಲಿ ಕಥೆ ಎಷ್ಟು ಮುಖ್ಯವೋ ಕಥನದ ಶೈಲಿ ಅದಕ್ಕಿಂತಲೂ ಮುಖ್ಯ. ಈ ವಿಷಯದಲ್ಲಿ 'ಬೆಳದಿಂಗಳ ಬಾಲೆ'ಗೆ 'ಬೆಳದಿಂಗಳ ಬಾಲೆ'ಯೇ ಸಾಟಿ! ನಿಗೂಢ ತಿರುವಿನಲ್ಲಿ ನಿಂತ ನಿರ್ಮಲ ಪ್ರೇಮಿಯೊಬ್ಬನ ಉತ್ಕಟ ಭಾವನೆಗಳನ್ನು ಓದಿದ ಪ್ರತಿಯೊಬ್ಬರ ಕಣ್ಣಲ್ಲಿ ನೀರಾಡುವಂತಿದೆ ಕಥನದ ನಿರೂಪಣಾ ಶೈಲಿ. ಕಾದಂಬರಿ ಓದಿ ಮುಗಿಸಿದ ಮೇಲೆ ನಮ್ಮದೇ ಒದ್ದಾಟ, ಕನವರಿಕೆ, ಭಾವನೆಗಳನ್ನೆಲ್ಲಾ ಕದ್ದು ಕಾದಂಬರಿಯಾಗಿಸಿರುವ ಲೇಖಕ ಯಂಡಮೂರಿ ವೀರೇಂದ್ರ ನಾಥ್, ಆ ತಪ್ಪಿಗಾಗಿ ಓದುಗರ ಹೃದಯದಲ್ಲಿ ಅಜೀವ ಬಂಧಿಯಾಗುತ್ತಾರೆ. ಈ ಸುಂದರ ಪ್ರೇಮಕಾವ್ಯವನ್ನು ನವಿರಾಗಿ ಕನ್ನಡಕ್ಕೆ ತಂದ ವಂಶಿಯವರಿಗೆ ಮತ್ತೊಮ್ಮೆ ಕೃತಜ್ಞತೆ ಹೇಳಲೇಬೇಕು. 

ಪ್ರೀತಿಸುವ ಪ್ರತಿಯೊಂದು ಮನಸ್ಸೂ ಓದಲೇಬೇಕಾದ ಕಾದಂಬರಿ 'ಬೆಳದಿಂಗಳ ಬಾಲೆ'. ತಪ್ಪದೇ ಓದಿ. ಓದುತ್ತಾ ಓದುತ್ತಾ ನೀವೇ ರೇವಂತ್ ಆಗಿ ಜೆ.ಪಿ.ನಗರದ ಜನಭರಿತ ಮನೆಯೆದುರು ತುಂಬುಗಣ್ಣಿನೊಂದಿಗೆ ನಿಲ್ಲದೇ ಹೋದರೆ ಆಗ ಕೇಳಿ.

ಕೃತಿ: ಬೆಳದಿಂಗಳ ಬಾಲೆ
ಪ್ರಕಾರ: ಕಾದಂಬರಿ
ಲೇಖಕರು: ಯಂಡಮೂರಿ ವೀರೇಂದ್ರನಾಥ್.
ಕನ್ನಡಕ್ಕೆ: ವಂಶಿ.
ಮೂಲ: ತೆಲುಗಿನ ವೆನ್ನೆಲಲೋ ಆಡಪಿಲ್ಲ.
ಪ್ರಕಾಶಕರು: ಸಾಹಿತ್ಯ ನಂದನ,
ನಂ.9, ನಾಲ್ಕನೇ ಇ ಬ್ಲಾಕ್,
ರಾಜಾಜಿನಗರ, ಬೆಂಗಳೂರು 560010.
ಫೋನ್: 080-23507170

No comments:

Post a Comment