Saturday 18 February 2017

ನಾಳೆ ಬಾ (ಜೋಗಿ)


Naale baa (Jogi)

(ಉದಯ ಮರಕಿಣಿ ಅವರು ಬರೆದ ಪುಸ್ತಕದ ಬೆನ್ನುಡಿಯಿಂದ ಆಯ್ದದ್ದು)


'ದೆವ್ವದ ಕತೆ ಹೇಳೂ....' ಅಂತ ನಾವೆಲ್ಲಾ ರಾತ್ರೆ ಹೊತ್ತಲ್ಲಿ ಅಜ್ಜಿಯನ್ನು ಪೀಡಿಸುತ್ತಿದ್ದ ದಿನಗಳು ನನಗೆ ಇಂದಿಗೂ ನೆನಪಿವೆ. ಅಜ್ಜಿ ದೆವ್ವದ ಕತೆ ಹೇಳಬೇಕು, ಅದನ್ನು ಕೇಳುತ್ತಾ ನಾವು ನಿದ್ದೆಗೆ ಜಾರಬೇಕು. ಕನಸಲ್ಲಿ ಅದೇ ದೆವ್ವ ಪ್ರತ್ಯಕ್ಷವಾಗಿ ನಮ್ಮನ್ನು ಪೀಡಿಸಬೇಕು. ಭೂತ, ಪ್ರೇತ, ಪಿಶಾಚಿ, ದೆವ್ವ ಇವೆಲ್ಲವೂ ನಮ್ಮ ಪಾಲಿಗೆ ಒಂದೇ ಜಾತಿಗೆ ಸೇರಿದವು. ಈ ನಿರಾಕಾರ ಜೀವಿಗಳನ್ನು ನಾವು ನೋಡಿದ್ದೇವೆ ಎಂದು ನನ್ನ ಹಳ್ಳಿಯಲ್ಲಿರುವ ಮುಕ್ಕಾಲು ಪಾಲು ಹಿರಿಯರು ಇಂದಿಗೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಬಹುಷಃ ಇದು ಮಕ್ಕಳನ್ನು ರಂಜಿಸುವುದಕ್ಕೆ ಅಥವಾ ಬೆದರಿಸುವುದಕ್ಕೆ ಅವರೇ ಹುಡುಕಿಕೊಂಡ ಉಪಾಯವಿರಬಹುದು. ಸಾಮಾನ್ಯವಾಗಿ ಎಲ್ಲಾ ದೆವ್ವಗಳ ಹುಟ್ಟಿನ ಹಿಂದೆ ಒಂದು ಅಸಹಜ ಸಾವು ಇದ್ದೇ ಇರುತ್ತದೆ. ಅದುವೇ ಕತೆಯ ಮೂಲ, ಮಿಕ್ಕಿದ್ದೆಲ್ಲ ದೆವ್ವದ ಲೀಲೆಗೆ ಮೀಸಲು. 


ಭಯ, ಕುತೂಹಲವನ್ನೇ ಗ್ರಾಸವಾಗಿಸಿಕೊಂಡಿದ್ದರೂ ತರ್ಕದ ಪರಿಧಿಯೊಳಗೇ ಹರಿದಾಡುವ ಇಂಥಾ ದೆವ್ವದ ಕತೆಗಳನ್ನು ಜೋಗಿ ದೆವ್ವಗಳೇ ಬೆಚ್ಚಿಬೀಳುವಂತೆ ಬರೆದಿದ್ದಾರೆ. 'ಓ ಮನಸೇ...' ಪಾಕ್ಷಿಕದಲ್ಲಿ ಈ ಕತೆಗಳು ಸರಣಿಯಾಗಿ ಪ್ರಕಟವಾದಾಗ ಕೆಲವು ಓದುಗರು ಈ ದೆವ್ವಗಳು ಇಂದಿಗೂ ಬದುಕಿವೆಯಾ ಎಂದು ಪೋನ್ ಮಾಡಿ ವಿಚಾರಿಸಿದ್ದುಂಟು. ಸದ್ಯ, ಅಡ್ರೆಸ್ ಕೇಳಲಿಲ್ಲ! ಹಾಗೆ ನೋಡಿದರೆ ನಾನು ಮತ್ತು ಜೋಗಿ ಇಬ್ಬರೂ ದೆವ್ವಗಳ ಊರಿನಿಂದಲೇ ಬಂದವರು. ಅವುಗಳ ಜೊತೆಗಿನ ಒಡನಾಟ ನಮ್ಮನ್ನು ಮನುಷ್ಯರನ್ನಾಗಿಸಿದೆ ಮತ್ತು ಬೆಂಗಳೂರಿನ ಪ್ರಜೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ನೆರವಾಗಿದೆ. ನಮ್ಮಿಬ್ಬರ ಭೂತಕಾಲವನ್ನು ಸಹನೀಯವಾಗಿಸಿದ ಈ ಎಲ್ಲಾ ದೆವ್ವಗಳಿಗೂ ಕೃತಜ್ಞತೆಯನ್ನು ಹೇಳುತ್ತಾ ಇಲ್ಲಿರುವ ತರಲೆ ದೆವ್ವಗಳ ಕೀಟಲೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಆ ಭಗವಂತ ನಿಮಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.


-ಉದಯ ಮರಕಿಣಿ.


ಕೃತಿಯ ಹೆಸರು: ನಾಳೆ ಬಾ

ಲೇಖಕರು: ಜೋಗಿ (ಗಿರೀಶ್ ರಾವ್ ಹತ್ವಾರ್)
ಪ್ರಕಾರ: ಕಥಾಸಂಕಲನ.
ಪ್ರಕಾಶಕರು: ಅಂಕಿತ ಪುಸ್ತಕ,
ಗಾಂಧಿಬಜಾರ್, ಬಸವನಗುಡಿ,
ಬೆಂಗಳೂರು 560004.
ಫೊನ್: 080-26617100/26617755

ಲೇಖಕರ ಇನ್ನಿತರ ಕೆಲವು ಕೃತಿಗಳು: ಮಹಾನಗರ, ಬೆಂಗಳೂರು, ರೂಪರೇಖೆ, ಚಿಕ್ಕಪ್ಪ, ದೇವರಹುಚ್ಚು, ಚೈತ್ರ ವೈಶಾಖ ವಸಂತ, ಕಥೆ ಚಿತ್ರಕಥೆ ನಿರ್ದೇಶನ, ಊರ್ಮಿಳಾ, ಚಿಟ್ಟೆ ಹೆಜ್ಜೆ ಜಾಡು.

No comments:

Post a Comment