Wednesday 15 March 2017

ನಮ್ಮಮ್ಮ ಅಂದ್ರೆ ನಂಗಿಷ್ಟ (ವಸುಧೇಂದ್ರ)



Nammamma andre nangishta (Vasudendra) ಒಂದು ಅನುಭವ. ಅದಕ್ಕೆ ಎರೆಡು ಲೋಟ ಹಾಸ್ಯ, ಒಂದೂವರೆ ಸೌಟು ಭಾವುಕತೆ, ಮುಕ್ಕಾಲು ಚಮಚ ನೀತಿ, ಚಿಟಿಕೆಯಷ್ಟು ಆತ್ಮವಿಮರ್ಷೆ- ಇವಿಷ್ಟನ್ನು ಬೆರೆಸಿ, ಸುಂದರ ನಿರೂಪಣೆಯಲ್ಲಿ ಹದವಾಗಿ ಬೇಯಿಸಿದಾಗ ಹುಟ್ಟುವ ಸ್ವಾದಿಷ್ಟವಾದ ಬರಹವೇ "ಲಲಿತ ಪ್ರಬಂಧ". ನೋಡುವುದಕ್ಕೆ ಸರಳ. ಓದುವುದಕ್ಕೆ ಸವಿ. ಭಾರೀ ಮಸಾಲೆಗಳ ಖಾರವಿಲ್ಲದೆ, ಅನಗತ್ಯ ಅಲಂಕಾರಗಳ ಆಡಂಬರವಿಲ್ಲದೆ ನಿಜವನ್ನು ತುಂಬಾ ಸಹಜವಾಗಿ, ಅಷ್ಟೇ ಸುಂದರವಾಗಿ ಹೇಳುವ ಜೇಡರ ಬಲೆಯಂತಹಾ ಕುಶಲತೆ, ನಾಜೂಕುತನ ಈ ಲಲಿತ ಪ್ರಬಂಧದ ಪ್ರಮುಖ ಲಕ್ಷಣ.

"ನಮ್ಮಮ್ಮ ಅಂದ್ರೆ ನಂಗಿಷ್ಟ" ಕನ್ನಡದ ಶ್ರೇಷ್ಠ ಸುಲಲಿತ ಪ್ರಬಂಧ ಸಂಕಲನಗಳಲ್ಲೊಂದು. ಮಕ್ಕಳಾದ ನಾವು-ನೀವು ಹುಟ್ಟಿದ ಕ್ಷಣದಲ್ಲಿ ಅತ್ತ ಮೊದಲ ಅಳುವಿನಿಂದ ಹಿಡಿದು ಅಮ್ಮನನ್ನೇ ಅಳಿಸುವಷ್ಟು ದೊಡ್ಡವರಾದ ತನಕ ಘಟಿಸಿದ ಘಟನೆಗಳೇ ಲೇಖಕ ವಸುಧೇಂದ್ರ ಅವರ ಕೈಕುಲುಮೆಯಲ್ಲಿ ಅರಳಿ ಸುಂದರ ಬರಹಗಳಾಗಿವೆ. ಇಲ್ಲೊಬ್ಬ ಅಮ್ಮ ಇದ್ದಾಳೆ... ಚಡ್ಡಿಯಲ್ಲೇ 'ಗಲೀಜು' ಮಾಡಿಕೊಂಡು ಸಕಲರಿಂದಲೂ ಅಸ್ಪೃಷ್ಯನಾಗಿ ಅಳಹತ್ತಿದ ಮಗನನ್ನು ರಮಿಸುವ ಅಮ್ಮ. ಸ್ಟೀಲ್ ಪಾತ್ರೆಗಳನ್ನು ಬಂಗಾರವೆಂಬಂತೆ ಪ್ರೀತಿಸುವ ಅಮ್ಮ. ಬೈದ ಮಗನೆದುರು ಕುಳಿತು "ನೀನು ನಂಗೆ ಬೈದುಬಿಟ್ಟಿ" ಎಂದು ಮುಗ್ಧವಾಗಿ ಕಣ್ಣೀರಿಡುವ ಅಮ್ಮ. ಅಪರಿಚಿತ ಬೆಂಗಳೂರಿನ ಬೀದಿಯಲ್ಲಿ ಕಳೆದುಹೋಗುವ ಅಮ್ಮ. ಕೊನೆಗೆ ಶೌಚಾಲಯಕ್ಕೆ ಹೋದಷ್ಟೇ ಸಲೀಸಾಗಿ ಜಗತ್ತನ್ನೇ ಬಿಟ್ಟುಹೋದ ಅಮ್ಮ.... ನಾವೆಲ್ಲಾ ನಮಗೇ ತಿಳಿಯದಂತೆ ಅಮ್ಮನೆಡೆಗೆ ಅದೆಂತಹಾ ಉತ್ಕಟ ಪ್ರೀತಿಯನ್ನು ಎದೆಯಲ್ಲಿಟ್ಟುಕೊಂಡಿದ್ದೇವೆಂಬುದನ್ನು ಲೇಖಕರು ಇಲ್ಲಿ ಕಂಬನಿಯ ಸಾಕ್ಷಿಯ ಸಮೇತ ರುಜುವಾತು ಮಾಡಿದ್ದಾರೆ. ಬಾರದ ಬಾಲ್ಯದೊಳಗೆ ಮತ್ತದೇ ಅಮ್ಮನ ಕೈಹಿಡಿದು ನಡೆಯುವ ಇಚ್ಛೆಯಿದ್ದರೆ, ಅವಳ ಮಮತೆಯ ಮಡಿಲೊಳಗೆ ಮತ್ತೊಮ್ಮೆ ಮಗುವಾಗುವ ಹಂಬಲವಿದ್ದರೆ "ನಮ್ಮಮ್ಮ ಅಂದ್ರೆ ನಂಗಿಷ್ಟ"ವನ್ನೊಮ್ಮೆ ಓದಿ.

ವಿವರಗಳು:
ಕೃತಿ: ನಮ್ಮಮ್ಮ ಅಂದ್ರೆ ನಂಗಿಷ್ಟ.
ಲೇಖಕರು: ವಸುಧೇಂದ್ರ.
ಪ್ರಕಾರ: ಸುಲಲಿತ ಪ್ರಬಂಧ.
ಪ್ರಕಾಶಕರು:
'ಛಂದ ಪುಸ್ತಕ'
ಐ-004, ಮಂತ್ರಿ ಪ್ಯಾರಡೈಸ್,
ಬನ್ನೇರುಘಟ್ಟ ರಸ್ತೆ,
ಬೆಂಗಳೂರು 76.
ಫೋನ್: 080-26742233
ಇ ಮೇಯ್ಲ್: vas123u@rocketmail.com
ಬೆಲೆ ರೂ. 80/-

No comments:

Post a Comment