Tuesday 16 May 2017

ಈ ಪರಿಯ ಸೊಬಗು (ಪಿ. ಸಾಯಿನಾಥ್ ಮತ್ತು 'ಪರಿ' ತಂಡ)


Ee pariya sobagu (P. Sayinsth and 'Pari' team) ಅಂತಾರಾಷ್ಟ್ರೀಯ ಖ್ಯಾತಿಯ ಲೇಖಕರೂ, ಪತ್ರಕರ್ತರೂ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರೂ ಆಗಿರುವ ಪಿ. ಸಾಯಿನಾಥ್ ಭಾರತೀಯ ಪತ್ರಿಕೋದ್ಯಮದಲ್ಲೊಂದು ದೊಡ್ಡ ಹೆಸರು. ಪಿ. ಸಾಯಿನಾಥ್ ರವರ ಕೃತಿಯಾದ `ಎವರಿಬಡಿ ಲವ್ಸ್ ಅ ಗುಡ್ ಡ್ರಾಟ್' ದೇಶವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿ ಅಳವಡಿಸಿಕೊಳ್ಳಲಾಗಿರುವ ವಿಶಿಷ್ಟ ಕೃತಿ. ಸಾಯಿನಾಥ್ ಹಾಗೂ ಅವರು ಹುಟ್ಟುಹಾಕಿದ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) ತಂಡದವರು ದಾಖಲಿಸಿರುವ ಸ್ವಾರಸ್ಯಕರ ಲೇಖನಗಳನ್ನೇ ಕನ್ನಡಕ್ಕೆ ತಂದು "ಈ ಪರಿಯ ಸೊಬಗು'' ಎಂಬ ಅಪರೂಪದ ಪುಸ್ತಕವನ್ನು ಕನ್ನಡ ಪುಸ್ತಕಪ್ರಪಂಚಕ್ಕೆ ನೀಡಿದ್ದಾರೆ ಮಾಧ್ಯಮಲೋಕದ ದಿಗ್ಗಜರಲ್ಲೊಬ್ಬರಾದ ಶ್ರೀ ಜಿ. ಎನ್. ಮೋಹನ್ ರವರು. ಸಾಯಿನಾಥರ ಪರಿ ತಂಡದ ಉತ್ಸಾಹಿಗಳಂತೆಯೇ ಕನ್ನಡದ ಕೆಲ ಆಸಕ್ತ, ಪ್ರತಿಭಾವಂತ ಬರಹಗಾರರು ಈ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದರೆ ಜಿ. ಎನ್. ಮೋಹನ್ ರವರು ಇವುಗಳನ್ನು ಸಂಪಾದಿಸಿದ್ದಾರೆ. ಜಿ. ಎನ್. ಮೋಹನ್ ರವರು ಪಿ. ಸಾಯಿನಾಥ್ ರವರ ಪ್ರಖ್ಯಾತ `ಎವರಿಬಡಿ ಲವ್ಸ್ ಅ ಗುಡ್ ಡ್ರಾಟ್' ಕೃತಿಯನ್ನು `ಬರ ಅಂದ್ರೆ ಎಲ್ಲರಿಗೂ ಇಷ್ಟ' ಎಂಬ ಹೆಸರಿನಲ್ಲೂ ಕನ್ನಡಕ್ಕೆ ತಂದಿದ್ದರು ಎಂಬುದು ಇಲ್ಲಿ ನೆನಪಿಸಿಕೊಳ್ಳಬೇಕಾದ ಅಂಶ. 

`ಪರಿ' ತಂಡವು ಪ್ರಸ್ತುತಪಡಿಸಿರುವ ಭಾರತದ ವ್ಯಾಪ್ತಿಯು ದೊಡ್ಡದು. ಇದು ನಮ್ಮ ನಡುವೆಯೇ ಇದ್ದರೂ ನಮ್ಮ ಅನುಭವಕ್ಕೆ ಬಾರದೆ ಉಳಿದುಹೋದ ಅಜ್ಞಾತ ಭಾರತ. ಕಣ್ಸೆಳೆಯುವ ವೈವಿಧ್ಯತೆಯ ಜೊತೆಗೇ ನೂರಾರು ಸಮಸ್ಯೆಗಳನ್ನೂ ತನ್ನ ಒಡಲಾಳದಲ್ಲಿಟ್ಟುಕೊಂಡು ದಿನತಳ್ಳುತ್ತಿರುವ ಗ್ರಾಮೀಣ ಭಾರತ. ಪಿ. ಸಾಯಿನಾಥ್ ಮತ್ತು `ಪರಿ' ತಂಡದವರು ಗ್ರಾಮೀಣ ಭಾರತದ ನಾಡಿಮಿಡಿತಗಳನ್ನು ಅದೆಷ್ಟು ಚೆನ್ನಾಗಿ ಅಥರ್ೈಸಿಕೊಂಡಿದ್ದಾರೆಂದರೆ ಇಲ್ಲಿ ರೈತರು, ಕುಶಲಕಮಿರ್ಗಳು, ಆದಿವಾಸಿಗಳು, ಕಾಮರ್ಿಕರು, ವ್ಯಾಪಾರಿಗಳು, ಕಲಾವಿದರು, ಶಿಕ್ಷಕರು... ಹೀಗೆ ಪ್ರತಿಯೊಬ್ಬರೂ ಇಲ್ಲಿ ಬಂದುಹೋಗುತ್ತಾರೆ. ಕೃಷಿ, ಬಡತನ, ಸರ್ಕಾರ, ಕಾಮಿರ್ಕವರ್ಗ, ಮಾರುಕಟ್ಟೆ, ಆರ್ಥಿಕತೆ, ಉದ್ಯಮ, ಶಿಕ್ಷಣ, ಸಾರಿಗೆ, ಕಲೆ, ಸಂಸ್ಕೃತಿ, ಜನಪದ, ಭಾಷೆ, ಬುಡಕಟ್ಟು, ಸಂಶೋಧನೆ, ಚಳುವಳಿ, ಪದ್ಧತಿಗಳು... ಹೀಗೆ ಏನುಂಟು, ಏನಿಲ್ಲ ಈ `ಪರಿ'ಯೆಂಬ ಲೋಕದಲ್ಲಿ!   

ಗ್ರಾಮೀಣ ಭಾರತ ಎಂದರೆ ರೈತರು, ಆತ್ಮಹತ್ಯೆ, ಚಳುವಳಿ ಇತ್ಯಾದಿಗಳಷ್ಟೇ ಎಂಬ ಭ್ರಮೆಯಲ್ಲಿರುವವರಿಗೆ `ಈ ಪರಿಯ ಸೊಬಗು' ಹೊಸದೊಂದು ಒಳಹನ್ನು ಪ್ರಸ್ತುತ ಪಡಿಸುವುದರಲ್ಲಿ ಸಂಶಯವಿಲ್ಲ. ಮಾಯವಾಗುತ್ತಿರುವ ಗ್ರಾಮೀಣ ಕಲೆಯೊಂದರ ಕೊನೆಯ ಪೀಳಿಗೆಯ ಕುಡಿಗಳು, ಬರ-ಸಾಲ-ಯೋಜನೆಗಳ ಹಿಂದಿರುವ ಅರ್ಧಸತ್ಯಗಳು, ಬ್ಯೂರಾಕ್ರಸಿಯ, ವ್ಯವಸ್ಥೆಯ ನೂರಾರು ಅಡೆತಡೆಗಳಿದ್ದರೂ ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೆ ವ್ಯವಸಾಯ, ಶಿಕ್ಷಣ, ಕಲೆ ಇತ್ಯಾದಿ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು, ಸಂಸ್ಥೆಗಳು ಹೀಗೆ ಹಲವು ಕೌತುಕಮಯ ಸಂಗತಿಗಳು ಇಲ್ಲಿ ಓದುಗನಿಗೆ ಸಿಗುತ್ತವೆ. ದೃಶ್ಯ, ಮುದ್ರಣ ಮತ್ತು ಅಂತರ್ಜಾಲ ಹೀಗೆ ಮಾಧ್ಯಮ ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲೂ ಕೈಯಾಡಿಸಿ ಯಶಸ್ವಿಯಾಗಿರುವ ಪಿ. ಸಾಯಿನಾಥ್ ಮತ್ತು ಅವರ ಬೆನ್ನ ಹಿಂದಿರುವ ಉತ್ಸಾಹಿ ತಂಡದ ಬದ್ಧತೆಯು ಇಲ್ಲಿಯ ಬರಹಗಳಲ್ಲಿ ಎದ್ದುಕಾಣುತ್ತದೆ. ಗ್ರಾಮೀಣಭಾರತದ ಈ ಗಾಥೆಗಳನ್ನೆಲ್ಲಾ ಓದುತ್ತಾ ಹೋದರೆ ದಿನವಿಡೀ ಅರಚಾಡುವ ಅಬ್ಬರದ ಮಾಧ್ಯಮಗಳಿಗೆ ಇವುಗಳ್ಯಾವುವೂ ಏಕೆ ದಕ್ಕಲೇ ಇಲ್ಲ ಎಂದು ಅಚ್ಚರಿಯಾಗುತ್ತದೆ. ಸಾಯಿನಾಥ್ ಮತ್ತು ಅವರ `ಪರಿ' ತಂಡವು ವಿಶಿಷ್ಟವಾಗಿ jನಿಲ್ಲುವುದೇ ಇಲ್ಲಿ.    

`ಕ್ರೇಜಿ ಫ್ರಾಗ್ ಮೀಡಿಯಾ'ದ ನೇತೃತ್ವದಲ್ಲಿ ಜಿ. ಎನ್. ಮೋಹನ್ ರವರು ಸಂಪಾದಿಸಿರುವ ಈ ಅಪರೂಪದ ಕೃತಿಯನ್ನು ಪಲ್ಲವ ಪ್ರಕಾಶನವು ಸುಂದರವಾಗಿ ಹೊರತಂದಿದೆ. ಅನುವಾದಗಳೂ ಕೂಡ ಸುಲಲಿತವಾಗಿದ್ದು ತಮ್ಮ ನಿರೂಪಣಾ ಶೈಲಿಯ ಗಟ್ಟಿತನದಿಂದ ಓದುಗನ ಆಸಕ್ತಿಯನ್ನು ಹಿಡಿದಿಟ್ಟುಕೊಳ್ಳಲು ಸಮರ್ಥವಾಗಿವೆ. ಗ್ರಾಮೀಣ ಭಾರತದ ವಿವಿಧ ಮಜಲುಗಳನ್ನು ಹತ್ತಿರದಿಂದ ಕಾಣಬಯಸುವ ಎಲ್ಲರೂ ಕೂಡ ಓದಲೇಬೇಕಾದ ಪುಸ್ತಕವಿದು.  

ಕೃತಿಯ ಹೆಸರು: ಈ ಪರಿಯ ಸೊಬಗು
ಲೇಖಕರು: ಪಿ. ಸಾಯಿನಾಥ್ ಮತ್ತು `ಪರಿ' ತಂಡ
ಸಂಪಾದನೆ: ಶ್ರೀ ಜಿ. ಎನ್. ಮೋಹನ್
ಪ್ರಕಾಶಕರು: ಪಲ್ಲವ ಪ್ರಕಾಶನ
ಪ್ರಕಾರ: ಅನುವಾದಿತ ಲೇಖನಗಳ ಸಂಗ್ರಹ
ಭಾಷೆ: ಕನ್ನಡ
ಪುಟಗಳು: 152
ವಿಳಾಸ: ಪಲ್ಲವ ಪ್ರಕಾಶನ, ಚನ್ನಪಟ್ಟಣ, ಬಳ್ಳಾರಿ - 583113
ದೂರವಾಣಿ ಸಂಖ್ಯೆ: 9480353507
ಲೇಖಕರ ಇನ್ನಿತರ ಕೆಲವು ಕೃತಿಗಳು:
- ಪಿ. ಸಾಯಿನಾಥ್: ಎವರಿಬಡಿ ಲವ್ಸ್ ಅ ಗುಡ್ ಡ್ರಾಟ್
- ಜಿ. ಎನ್. ಮೋಹನ್: ಬರ ಅಂದ್ರೆ ಎಲ್ಲರಿಗೂ ಇಷ್ಟ, ನನ್ನೊಳಗಿನ ಹಾಡು ಕ್ಯೂಬಾ, ಮೀಡಿಯಾ ಮಿಚೆರ್, ಡೋರ್ ನಂ. - 142, ಕಾಫಿ ಕಪ್ಪಿನೊಳಗೆ ಕೊಲಂಬಸ್ ಇತ್ಯಾದಿಗಳು  

(ಮಾಹಿತಿ ಸಂಗ್ರಹ ಹಾಗೂ ನಿರೂಪಣೆ: ಶ್ರೀ. ಪ್ರಸಾದ್ ನಾಯ್ಕ್ ಅಂಗೋಲ)







No comments:

Post a Comment