Wednesday 17 May 2017

ದ ಸ್ಟ್ರೇಂಜರ್ ಬಿಸೈಡ್ ಮಿ (ಲೇಖಕರು: ಆನ್ ರೂಲ್)


The stranger beside me (Ann Rule) ನಿಮಗೆ ಅಪರಾಧ ಜಗತ್ತಿನ ಬಗ್ಗೆ ಆಸಕ್ತಿಯಿದ್ದರೆ, ಆತ್ಮಕಥನ/ಜೀವನಕಥನಗಳನ್ನು ಓದುವ ಹುಚ್ಚಿದ್ದರೆ, ನಾನ್ ಫಿಕ್ಷನ್ ಗಳಲ್ಲೂ ಫಿಕ್ಷನ್ ಗಳ ರೋಚಕತೆಯೇ ಬೇಕೆಂಬ ಆಸೆಬುರುಕರೂ ನೀವಾಗಿದ್ದರೆ "ದ ಸ್ಟ್ರೇಂಜರ್ ಬಿಸೈಡ್ ಮಿ'' ನಿಮಗಾಗಿಯೇ ಇರುವ ಒಂದು ಫುಲ್ ಪ್ಯಾಕೇಜ್. ಕುಖ್ಯಾತ ಸರಣಿಹಂತಕನಾಗಿದ್ದ ಥಿಯೊಡೋರ್ ರಾಬಟರ್್ ಬಂಡಿ ಉಫರ್ಟೆಡ್ ಬಂಡಿಯ ಜೀವನ ಕಥನವಿದು. ಅಪರಾಧ ಜಗತ್ತಿನ ಬಗ್ಗೆಯೇ ಮಹತ್ವದ ಕೃತಿಗಳನ್ನು ಬರೆದು ಖ್ಯಾತರಾದ ಅಮೆರಿಕನ್ ಆನ್ ರೂಲ್ ಈ ಕೃತಿಯ ಲೇಖಕಿ. ಖ್ಯಾತ ಕಾದಂಬರಿಕಾರ ಸಿಡ್ನಿ ಶೆಲ್ಡನ್ ನ ಕಾದಂಬರಿಗಳನ್ನು ಓದಿ ಮುಗಿಸುವವರೆಗೂ ಹೇಗೆ ಎತ್ತಿಡುವುದು ಕಷ್ಟವೋ ಆನ್ ರೂಲ್ ರ ಪುಸ್ತಕಗಳಲ್ಲೂ ಅಂಥದ್ದೇ ಶಕ್ತಿಯಿದೆ. ಅದರಲ್ಲೂ "ದ ಸ್ಟ್ರೇಂಜರ್ ಬಿಸೈಡ್ ಮಿ'' ಆನ್ ರನ್ನು ಇಂಗ್ಲಿಷ್ ಭಾಷೆಯ ಸಾಹಿತ್ಯಲೋಕದಲ್ಲಿ ದೊಡ್ಡ ಮಟ್ಟದಲ್ಲಿ ಪರಿಚಯಿಸಿದ ಕೃತಿಯೂ ಹೌದು. 

ಟೆಡ್ ಬಂಡಿ ತನ್ನ ಜೀವಿತಾವಧಿಯಲ್ಲಿ ಅಮೇರಿಕಾದಂತಹ ಅಮೇರಿಕಾವನ್ನೇ ಚಳಿಗಾಲದಲ್ಲೂ ಬೆವರುವಂತೆ ಮಾಡಿದವನು. ಸತ್ತ ನಂತರವೂ ಮನಃಶಾಸ್ತ್ರಜ್ಞರಿಗೆ, ಅಪರಾಧ ಲೋಕದ ಸಂಶೋಧಕರಿಗೆ, ಮನೋವಿಜ್ಞಾನಕ್ಕೆ ಆತ ಬಿಡಿಸಲಾರದ ಒಗಟಾಗಿ ಕಾಡಿದವನು. ಬಂಡಿ ಮಾಧ್ಯಮಗಳಲ್ಲಿ 'ಕ್ಯಾಂಪಸ್ ಕಿಲ್ಲರ್', 'ರಾಕ್ ಸ್ಟಾರ್ ಆಫ್ ಸೀರಿಯಲ್ ಕಿಲ್ಲರ್ಸ್' ಇತ್ಯಾದಿ ವಿಶೇಷಣಗಳಿಂದ ಕುಖ್ಯಾತಿಯನ್ನು ಪಡೆದವನು. ಎರಡೆರಡು ಬಾರಿ ಜೈಲಿನಿಂದ ತಪ್ಪಿಸಿಕೊಂಡವನು. ಹೋದಲ್ಲೆಲ್ಲಾ ಹೆಣಗಳನ್ನು ಉರುಳಿಸುತ್ತಲೇ ಹೋದವನು. ಗೋಮುಖವ್ಯಾಘ್ರನೆಂಬ ಪದಕ್ಕೆ ಸಾಕ್ಷಾತ್ ಉದಾಹರಣೆಯೆಂಬಂತೆ ಜೀವಿಸಿದವನು. ಸರಣಿಹಂತಕನಾಗಿದ್ದರೂ ಹಾಲಿವುಡ್ ನಟನಂತೆ ಮಾಧ್ಯಮಗಳ ಕ್ಯಾಮೆರಾಗಳಿಗೆ ಗತ್ತಿನಿಂದ ಪೋಸು ಕೊಟ್ಟವನು. ಸ್ವಭಾವತಃ ರಾಕ್ಷಸನಾಗಿದ್ದರೂ ತನ್ನ ಆಕರ್ಷಕ ಮ್ಯಾನರಿಸಂನಿಂದಾಗಿ ಮಹಿಳಾ ಅಭಿಮಾನಿಗಳನ್ನು ಹೊಂದಿದ್ದವನು. 

ಟೆಡ್ ಬಂಡಿ ಆನ್ ಗೆ ತನ್ನ ಪುಸ್ತಕದ ವಿಷಯವಷ್ಟೇ ಆಗಿರಲಿಲ್ಲ. ಆತ ಲೇಖಕಿಯ ಸ್ನೇಹಿತನೂ ಆಗಿದ್ದ. ಟೆಡ್ ಮತ್ತು ಆನ್ ಒಂದು ಕಾಲದಲ್ಲಿ ಕ್ರೈಸಿಸ್ ಸೆಂಟರ್ ಒಂದರಲ್ಲಿ ಜೊತೆಯಾಗಿಯೇ ಕೆಲಸ ಮಾಡಿದವರು. ಅದೂ ಕೂಡ ರಾತ್ರಿಯ ಪಾಳಿಗಳಲ್ಲಿ. ಹೀಗಾಗಿ ಟೆಡ್ ಬಂಡಿಯ ಖಾಸಗಿ ಜಗತ್ತಿನ ಮತ್ತು ಹೊರಜಗತ್ತಿನ ವ್ಯಕ್ತಿತ್ವಗಳೆರಡಕ್ಕೂ ಆನ್ ಸಾಕ್ಷಿಯಾಗಿದ್ದರು. ಇನ್ನು ಕ್ರೈಂ ರಿಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದ ಆನ್ ಪೋಲೀಸ್ ಇಲಾಖೆಗಳಲ್ಲೂ, ಪತ್ತೇದಾರರ ವಲಯದಲ್ಲೂ, ತಜ್ಞರ ಮತ್ತು ವಕೀಲರ ವಲಯದಲ್ಲೂ ಉತ್ತಮ ಹೆಸರನ್ನು ಗಳಿಸಿದವರು. ಹೀಗಾಗಿ ಬಂಡಿಯ ಬಹಳಷ್ಟು ಪ್ರಕರಣಗಳ ಸೂಕ್ಷ್ಮಾತಿಸೂಕ್ಷ್ಮ ವಿವರಗಳು ಆನ್ ರವರಿಗೆ ದಕ್ಕಿತ್ತು. ಭಯಾನಕ ಕೊಲೆಗಳು, ವಿಲಕ್ಷಣತೆ, ತನಿಖೆ, ಮನೋವಿಜ್ಞಾನ, ಅಪರಾಧ ಪತ್ತೆ, ನ್ಯಾಯಾಂಗ... ಹೀಗೆ ಈ ಕೃತಿಯು ತೆರೆದಷ್ಟೂ ಜ್ಞಾನದ ಬಾಗಿಲು. 

ಟೆಡ್ ಬಂಡಿಯ ಬಗ್ಗೆ ಬಹಳಷ್ಟು ಪುಸ್ತಕಗಳು ಹೊರಬಂದಿದ್ದರೂ ಆನ್ ರೂಲ್ ರ ಈ ಕೃತಿಯು ಎಲ್ಲವನ್ನೂ ಹಿಂದಿಕ್ಕಿ ಅಗ್ರಸ್ಥಾನದಲ್ಲಿ ನಿಲ್ಲುವಂಥದ್ದು. ವಿದ್ಯಾವಂತನೂ, ಸುಂದರಾಂಗನೂ, ಹಸನ್ಮುಖಿಯೂ, ಮೃದುಭಾಷಿಯೂ, ಒಳ್ಳೆಯ ಉದ್ಯೋಗದಲ್ಲಿದ್ದವನೂ, ತನ್ನ ಗೆಳೆಯರ ಬಳಗದಲ್ಲಿ ಎಲ್ಲರಿಗೂ ಬೇಕಾಗಿದ್ದವನೂ ಆಗಿದ್ದ ಟೆಡ್ ಸರಣಿಹಂತಕನಾಗಿದ್ದು ಹೇಗೆ? ಅವನು ಮಾಡಿದ ಬರ್ಬರ ಅತ್ಯಾಚಾರ ಮತ್ತು ಕೊಲೆಗಳೆಷ್ಟು? ಅವನ ಫ್ಯಾಂಟಸಿಗಳ, ವಿಲಕ್ಷಣ ಚಟುವಟಿಕೆಗಳ ಭೀಕರತೆಯಾದರೂ ಏನು? ಬಂಡಿ ಸತ್ತ ಎಂದು ಜಗಜ್ಜಾಹೀರಾದಾಗ ಅಮೆರಿಕನ್ನರು ಪಟಾಕಿ ಹಚ್ಚಿ ಸಂಭ್ರಮಿಸಿದ್ದೇಕೆ? ಬಂಡಿಯೆಂಬ ಸೈತಾನನ ವಿಶ್ವರೂಪವನ್ನು ತಿಳಿಯಬೇಕಾದರೆ "ದ ಸ್ಟ್ರೇಂಜರ್ ಬಿಸೈಡ್ ಮಿ'' ಗೆ ಸಾಟಿಯಾಗುವ ಬೇರ್ಯಾವ ಬೈಬಲ್ ಕೂಡ ಇಲ್ಲ.       

ಕೃತಿಯ ಹೆಸರು: 'ದ ಸ್ಟ್ರೇಂಜರ್ ಬಿಸೈಡ್ ಮಿ' : ದ ಶಾಕಿಂಗ್ ಇನ್ ಸೈಡ್ ಸ್ಟೋರಿ ಆಫ್ ಸೀರಿಯಲ್ ಕಿಲ್ಲರ್ ಟೆಡ್ ಬಂಡಿ
ಲೇಖಕರು: ಆನ್ ರೂಲ್
ಪ್ರಕಾರ: ಜೀವನ ಕಥನ
ಪುಟಗಳು: 670
ಪ್ರಕಾಶಕರು: ಪಾಕೆಟ್ ಬುಕ್ಸ್
ಭಾಷೆ: ಇಂಗ್ಲಿಷ್
ಲಭ್ಯತೆ: ಆನ್ಲೈನ್
ಲೇಖಕರ ಇನ್ನಿತರ ಕೆಲವು ಕೃತಿಗಳು: ಪ್ರೊಫೈಲ್ಸ್ ಇನ್ ಮರ್ಡರ್, ಪೊಸೆಷನ್, ಟೂ ಲೇಟ್ ಟು ಸೇ ಗುಡ್ ಬೈ, ಇಫ್ ಯೂ ರಿಯಲೀ ಲವ್ಡ್ ಮಿ, ಸ್ಮೋಕ್ ಮಿರರ್ಸ್ ಆಂಡ್ ಮರ್ಡರ್ ಇತ್ಯಾದಿಗಳು. 

(ಮಾಹಿತಿ ಸಂಗ್ರಹ ಹಾಗೂ ನಿರೂಪಣೆ: ಶ್ರೀ. ಪ್ರಸಾದ್ ನಾಯ್ಕ್ ಅಂಗೋಲ)

No comments:

Post a Comment